Saturday, February 07, 2009

Speech of L Basavaraju, president of the 75th Kannada Sahitya Sammelana

ಬುಧವಾರ, 4 ಫೆಬ್ರವರಿ 2009 (10:59 IST)
ಡಾ. ಎಲ್. ಬಸವರಾಜು -ನಮ್ಮ ಕರ್ನಾಟಕದ ಕೆಲವು ಭಾಗಗಳೂ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತೆಂಬುದನ್ನು- ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಮತ್ತು ಕೊಪ್ಪಳದಲ್ಲಿ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ, ಸಿದ್ಧಾಪುರದಲ್ಲಿ ಮತ್ತು ಜಟ್ಟಿಂಗ ರಾಮೇಶ್ವರದಲ್ಲಿ ಸಿಕ್ಕಿರುವ ಅವನ ಬ್ರಾಹ್ಮೀಲಿಪಿಯ ಪ್ರಾಕೃತ ಭಾಷೆಯ ಶಾಸನಗಳು ದೃಢಪಡಿಸುತ್ತಿವೆ. ಮತ್ತು ಆ ಶಾಸನಗಳಲ್ಲಿ ಸ್ವತಃ ಅಶೋಕನೇ ಹೇಳಿಕೊಂಡಿರುವಂತೆ - ಹೆಚ್ಚು ಶ್ರಮವಹಿಸಿ ಅವನು ತನ್ನನ್ನು ತಾನೇ ಧರ್ಮಸುಧಾರಣೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ - ಜಂಬೂ ದ್ವೀಪದ ಯಾವ ಜನ ಬೌದ್ಧಧರ್ಮದೊಡನೆ ಬೆರೆಯಲಾಗಿರಲಿಲ್ಲವೋ ಅವರೆಲ್ಲಾ ಬೆರೆಯಲು ಸಾಧ್ಯವಾಯಿತೆಂದೂ - ಈ ಧಾರ್ಮಿಕ ಸತ್ಫಲಗಳನ್ನು ಕೇವಲ ಉತ್ತಮ ಸ್ಥಿತಿಯಲ್ಲಿರುವವರೇ ಅಲ್ಲ ಕೆಳಸ್ಥಿತಿಯಲ್ಲಿರುವವರೂ ಪಡೆಯುವಂತಾ ಯಿತೆಂದೂ ಆಶಾದಾಯಕವಾಗಿ ಆ ಅಶೋಕನು ಆಡಿರುವ ಆ ಮಾತಿನಲ್ಲಿ- ಕರ್ನಾಟಕದ ಅಸಂಖ್ಯಾತ ದಲಿತ ವರ್ಗದ ಜನರೂ ಬೌದ್ಧರಾಗಿದ್ದರೆಂಬುದನ್ನು ಸೂಚಿಸುತ್ತದೆ. ಹೀಗಾಗಿ ದಲಿತರಿಗೆ ಈ ಬೌದ್ಧ ಧರ್ಮವಾದರೂ ಮಾನ್ಯತೆಯನ್ನು ಕೊಟ್ಟು ಅವರ ಆತ್ಮವಿಶ್ವಾಸವನ್ನೂ ಆತ್ಮಗೌರವವನ್ನೂ ಹೆಚ್ಚಿಸಲು ನೆರವಾಯಿತಲ್ಲಾ ಎನ್ನುವಂತಾದರೂ ಅದು ವೈದಿಕರಿಗೆ ಕಿರಿಕಿರಿಯನ್ನೇ ಉಂಟುಮಾಡಿದಂತಾಗಬಹುದು. ಅಶೋಕನು ತನ್ನ ಹಲವು ಶಾಸನಗಳಲ್ಲಿ ತನ್ನನ್ನು "ದೇವಾನಾಂ ಪ್ರಿಯ" ಎಂದು ಕರೆದುಕೊಂಡಿರುವುದನ್ನು ಆ ವೈದಿಕರು ಗೇಲಿ ಮಾಡುವುದು ನಡೆದೇ ಇತ್ತು! ಈಗಲೂ ಸಂಸ್ಕೃತದಲ್ಲಿ "ದೇವಾನಾಂ ಪ್ರಿಯ"ನೆಂದರೆ ಮೂರ್ಖನೆಂಬ ಅರ್ಥವಿದೆಯಂತೆ! ಆದ್ದರಿಂದ ಆ ವೈದಿಕರಿಗೆ ಬೌದ್ಧಧರ್ಮದ ಮೇಲೆ ಮತ್ತು ಅದರ ಪ್ರಚಾರಕರ ಮೇಲೆ ಏನೊಂದು ತಿರಸ್ಕಾರ ದ್ವೇಷವಿತ್ತೆಂಬುದನ್ನು ಊಹಿಸಬಹುದಾಗಿದೆ. ಅದೇನೇ ಇರಲಿ - ಕರ್ನಾಟಕದಲ್ಲಿ ಕ್ರಿ.ಪೂ. ಮೂರನೇ ಶತಮಾನದಿಂದಲೂ ಬೌದ್ಧಧರ್ಮ ಎಲ್ಲ ಹಂತಗಳಲ್ಲಿ ಪ್ರಚುರವಾಗಿದ್ದಿತಾದರೂ ಆ ಧರ್ಮವನ್ನು ಪ್ರಚಾರ ಮಾಡಲು ಕನ್ನಡದಲ್ಲಿ ಆ ಯಾರೂ ಕಾವ್ಯಗಳನ್ನು ಬರೆಯಲಿಲ್ಲವೆಂದರೆ ಅದೊಂದು ಅಸಂಬದ್ಧ ತೀರ್ಮಾನವೇ ಆದೀತು. ಕಾಲಾಂತರದಲ್ಲಿ ಬೌದ್ಧಧರ್ಮವು ಭಾರತದಿಂದಲೇ ಪರದೇಶಿಯಾಗಿ ಹೋಯಿತೆಂದ ಮೇಲೆ - ಕರ್ನಾಟಕದಲ್ಲಿಯಾದರೂ ಅದು ಆಗ ಕೇವಲ ಹೆಸರಿಗೆ ಮಾತ್ರ ಉಳಿದಿತ್ತೆಂಬುದರಲ್ಲಿ ಸತ್ಯಾಂಶವಿದೆ ಎನಿಸುವುದಾದರೂ- ೯ನೇ ಶತಮಾನದ ಆ ಕವಿರಾಜಮಾರ್ಗ ಗ್ರಂಥದಲ್ಲಿ ಹೇಳಿರುವಂತೆ - ಆ ವೇಳೆಗಾಗಲೇ ವಿಮಲೋದಯ- ನಾಗಾರ್ಜುನ-ಜಯಬಂಧು-ದುರ್ವಿನೀತ ಮುಂತಾದವರು ಕನ್ನಡ ಚಂಪೂ ಕಾವ್ಯಗಳನ್ನು ಬರೆದು "ಗದ್ಯಾಶ್ರಮ ಗುರುತಾ ಪ್ರತೀತಿ"ಯನ್ನು ಪಡೆದಿದ್ದರು ಎಂಬಲ್ಲಿ ಆ "ನಾಗಾರ್ಜುನ"ನೆಂಬವನಾದರೂ ಬೌದ್ಧಧರ್ಮಕ್ಕೆ ಸೇರಿದ ಒಬ್ಬ ಕನ್ನಡ ಕವಿಯಾಗಿರಲಾರನೇನು ಎಂಬುದೊಂದು ಅತ್ಯಾಶೆ! ಆದರೇನು ಹತ್ತನೇ ಶತಮಾನದ ನಮ್ಮ ಮಹಾಕವಿ ಪಂಪನು ಬರೆದ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯವೆಂಬ ಎರಡು ಕಾವ್ಯಗಳು ಅಂದಿನ ಕನ್ನಡ ಸಹೃದಯರಿಗೆ ಅದೆಷ್ಟು ರಸತೃಪ್ತಿಯನ್ನು ತಂದವೆಂದರೆ - ಆ ಹಿಂದಿನ ಕನ್ನಡ ಕವಿಗಳ ಯಾವ ಕಾವ್ಯವಾಗಲಿ ನಾಮಾವಶೇಷವಾದ ಹಳಗನ್ನಡ ಗ್ರಂಥಗಳ ಪಟ್ಟಿಯಲ್ಲಿ ತಂತಮ್ಮ ಹೆಸರನ್ನು ಬರೆಸಿ ಹಾಗೇ ಮಂಗಮಾಯವಾಗಿ ಹೋದವು- ಅಸಗ (ಕ್ರಿ.ಶ.೮೫೩), ಗುಣನಂದಿ (ಕ್ರಿ.ಶ.೯೦೦), ಒಂದನೇ ಗುಣವರ್ಮ ಎಂದು ಮುಂತಾಗಿ ಆ ಪಟ್ಟಿಯೂ ಬೆಳೆಯುತ್ತಲೇ ಹೋದೀತು! ಇದುವರೆಗೂ ನಾವು ಪ್ರಸ್ತಾಪಿಸಿದ ಕನ್ನಡ ಸಾಹಿತ್ಯವೆಲ್ಲವೂ ಕ್ರಿ.ಶ. ಹತ್ತನೇ ಶತಮಾನದವರೆಗಿನ ಮಾರ್ಗ ಅಥವಾ ಆ ಮಾರ್ಗ ಮತ್ತು ದೇಶೀ ಮಿಶ್ರವಾದ ಕನ್ನಡ ವಿದ್ವತ್ ಪ್ರಕಾರದವೇ ಆಗಿವೆ. ಅವನ್ನು ರಾಜಾಸ್ಥಾನದಲ್ಲಿ ಮತ್ತು ವಿದ್ವತ್ ಗೋಷ್ಠಿಗಳಲ್ಲಿ ಪಂಡಿತರು ಮಾತ್ರವೇ ಓದಲು ಅಥವಾ ಓದಿ ಹೇಳಲು ಸಾಧ್ಯವಿತ್ತು - ಅಂದರೆ ಅವು ಜನಸಾಮಾನ್ಯರ ಮತ್ತು ನತದೃಷ್ಟ ದಲಿತರ ಸರಳ ವಲಯದಿಂದ ದೂರವೇ ಉಳಿದಿದ್ದವು. ಇಷ್ಟೆಲ್ಲ ಸಾರಸ್ವತನಷ್ಟವಾದಾಗಲೂ ಕನ್ನಡ ಜನಸಾಮಾನ್ಯರು - ಅದರಲ್ಲೂ ಮುಖ್ಯವಾಗಿ ದಲಿತ ಜನ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ದುರದೃಷ್ಟದ ಪ್ರಮೇಯವಿರಲಿಲ್ಲ! ಯಾಕೆಂದರೆ - ಆ ಜನಸಾಮಾನ್ಯರಿಗೆ ಮತ್ತು ದಲಿತರಿಗೆ - "ಬೆದಂಡೆ" ಎಂಬ ಒಂದು ದೇಸೀ ಕಾವ್ಯಪ್ರಕಾರವು - ಆತ್ಮೀಯವಾಗಿ ಒಗ್ಗಿ ಬಂದಿತ್ತು. ಈ ಜನಪದ ಸಾಹಿತ್ಯ ಪ್ರಕಾರದ ಈ "ಬೆದಂಡೆ"ಯು ಕ್ರಿಸ್ತಪೂರ್ವ ಕಾಲದಲ್ಲಿರಲಿ - ಆಮೇಲೆ ಕ್ರಿಸ್ತಶಕಾರಂಭದಿಂದ ಹಿಡಿದು ಆ ೭-೮ನೇ ಶತಮಾನದವರೆಗಾಗಲೀ ಇರಲಿಲ್ಲವೆಂಬುದು - ಆಗ್ಗೆ ಕನ್ನಡದಲ್ಲಿ ಮಾತಾಡು ಹಾಡುವ ಜನರೇ ಇರಲಿಲ್ಲ- ಇದ್ದರೆಂಬುದಾದರೂ ಅವರು ಕಾವ್ಯಾಸ್ವಾದನೆ ಯನ್ನೇ ಅರಿಯದವರಾಗಿ ತೀರ ಕಾಡು ಜನರಂತಿದ್ದರೆಂದಂತಾಗುವುದು. ಇದು ಇಡಿಯಾಗಿ ನಮ್ಮ ಭಾರತೀಯ ಸಂಸ್ಕೃತಿ ಚರಿತ್ರೆಯನ್ನೇ ಅರಿಯದವರ ಎಗ್ಗು ಸಿಗ್ಗಿಲ್ಲದ ಮಾತಾದೀತು! ಆದ್ದರಿಂದಲೇ ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕನ್ನಡ ಜನಕ್ಕೇ ವಿಶಿಷ್ಟವಾದ (ಅಂದರೆ ಅವರ ಮನವನ್ನು ಸಾರಸ್ವತವಾಗಿ ಸೂರೆಗೊಂಡಿದ್ದ) ಕಾವ್ಯಪ್ರಕಾರವೊಂದು "ಬೆದಂಡೆ" ಎಂಬ ಹೆಸರಿನಲ್ಲಿ ಕಾಲದಿಂದಲೂ ಕರ್ನಾಟಕದಲ್ಲಿ ಬಳಕೆಯಲ್ಲಿತ್ತು. ಅದರ ಲಕ್ಷಣ ಆ ಕವಿರಾಜಮಾರ್ಗದ ಪ್ರಕಾರವೇ ಈ ಮುಂದಿನಂತಿದೆ: "ನುಡಿಗೆಲ್ಲಂ ಸಲ್ಲದ ಕನ್ನಡದೊಳ್ ಚತ್ತಾಣಮುಂ ಬೆದಂಡೆಯುಮೆಂದು ಈಗಡಿನ ನೆಗೞ್ತೆಯ ಕಬ್ಬದೊಳ್ ಒಡಂಬಡಂ ಮಾಡಿದರ್ ಪುರಾತನ ಕವಿಗಳ್" (ಕವಿರಾಜಮಾರ್ಗ - ೧-೩೨) "ಕಂದಂಗಳ್ ಅಲ್ಪಮಾಗಿರೆ ಸುಂದರ ವೃತ್ತಂಗಳ್ ಅಕ್ಕರಂ ಚೌಪದಿ ಮತ್ತಂ ದಲ್ ಗೀತಿಕೆ ತಿವದಿಗಳ್ ಅಂದಂಬೆತ್ತೆಸೆಯೆ ಪೇೞ್ದೊಡೆ ಅದು ಚತ್ತಾಣಂ" (ಕವಿರಾಜಮಾರ್ಗ ೧-೩೫) ಕಂದಮುಂ ಅಮಳಿನ ವೃತ್ತಮುಮ್ ಒಂದೊಂದು ಎಡೆಗೊಂದು ಜಾತಿ ಜಾಣೆಸೆಯೆ ಬೆಡಂಗೊಂದಿ ಅವೞೊಳಮರೆ ಪೇವಿಲ್ ಸುಂದರ ರೂಪಿಂ ಬೆದಂಡೆಗಬ್ಬಮದಕ್ಕುಂ! (ಕವಿರಾಜಮಾರ್ಗ ೧-೩೪) ಜಾಣೆಸೆಯೆ ಬೆಡಂಗೊಂದಿ ಅವೞೊಳಮರೆ ಪೇವಿಲ್ ಸುಂದರ ರೂಪಿಂ ಬೆದಂಡೆಗಬ್ಬಮದಕ್ಕುಂ! (ಕವಿರಾಜಮಾರ್ಗ ೧-೩೪) * ಮೇಲಣ ಮೂರೂ ಪದ್ಯಗಳಿಗೆ ಕ್ರಮವಾಗಿ ಅರ್ಥ: ಈ ಪದ್ಯಕಾವ್ಯ ಪ್ರಕಾರದಲ್ಲೇ ನಮ್ಮ ಪುರಾತನ ಕವಿಗಳು ಕನ್ನಡಕ್ಕೇ ವಿಶಿಷ್ಟವಾದ ಚತ್ತಾಣ ಮತ್ತು ಬೆದಂಡೆ ಎಂಬ ಎರಡು ಕಾವ್ಯ ಪ್ರಕಾರಗಳನ್ನು ಅಂತರ್ಗತಗೊಳಿಸಿದರು (೩೨). ಕೆಲವೇ ಕಂದಗಳಿದ್ದು ವೃತ್ತ- ಅಕ್ಕರ- ಚೌಪದಿ-ಗೀತಿಕೆ ಮತ್ತು ತ್ರಿಪದಿಗಳು ಸಮರಸವಾಗಿ ಕೂಡಿಬಂದರೆ ಅದೇ "ಚತ್ತಾಣ". (೩೫) ಒಂದೊಂದು ಕಂದ ಮತ್ತು ವೃತ್ತವೂ - ಆ ಎರಡರ ನಡುವೆ ಒಂದು "ಜಾತಿ"ಯೂ ಸೇರಿಬಂದರೆ [ಅಥವಾ ಕಂದವೂ ವೃತ್ತವೂ ಒಂದೊಂದೆಡೆಗೆ ಒಂ[ದೊಂ]ದೂ - ಇವುಗಳ ಜೊತೆಗೆ "ಜಾತಿ"ಯೂ ಹೊಂದಿಕೊಂಡು ಬಂದರೆ - ಅದೇ ಸುಂದರ ರೂಪಿನ ಬೆದಂಡೆ ಆಗುವುದು. (೩೪) ಕವಿರಾಜಮಾರ್ಗದ ಮೇಲಣ ಉಲ್ಲೇಖದಲ್ಲಿ ಅಸ್ಪಷ್ಟವಾದ ಭಾಗವೆಂದರೆ - ಇಡಿಯಾಗಿ ಚತ್ತಾಣ ಮತ್ತು ಬೆದಂಡೆಗಳನ್ನು ಕುರಿತುದು. ಅದರೊಳಗೂ ಅಸ್ಪಷ್ಟತಮವಾದುದೆಂದರೆ ಈ "ಬೆದಂಡೆ" ಎಂಬುದನ್ನು ಕುರಿತ ೩೪ನೇ ಪದ್ಯ. ಅದರೊಳಗೂ ಅಸ್ಪಷ್ಟತಮವಾದುದೆಂದರೆ ಕಗ್ಗಂಟಿನಂತಹ ಅರ್ಥಗ್ರಂಥಿಯನ್ನು ಒಳಗೊಂಡಿರುವ "ಜಾತಿ" ಎಂಬ ಶಬ್ದ! ಆದುದರಿಂದಲೇ ಈ ೩೪ನೇ ಕಂದಪದ್ಯ ಹುತ್ತದೊಳಗಣ ವೃತ್ತದಂತಿದ್ದು ನೆಲೆಗಾಣುವ ಪ್ರಯತ್ನ(ದಲ್ಲಿ) ಇದು ಸರ್ಪಕ್ಕೇ ಸವಾಲಿನಂತಿದೆ. ಈ ಬಗ್ಗೆ ತೀ.ನಂ.ಶ್ರೀ. ಯವರು ಈ ಸಂಬಂಧವಾಗಿ ಮಾಡಿರುವ ಸಂಶೋಧಿತ ನಿರ್ಣಯ ಈ ಮುಂದಿನಂತಿದೆ: "ಈ ಜಾತಿ(ಬೆದಂಡೆ)ಯ ಕಾವ್ಯದಲ್ಲಿ ಸಂಖ್ಯಾವಿಭೇದಗಳನ್ನು ಬಿಟ್ಟರೆ ಒಂದು ಮುಖ್ಯಾಂಶ ಎದ್ದು ಕಾಣುತ್ತದೆ. ಇದರಲ್ಲಿ ಬರುವ ಛಂದಸ್ಸು ಎರಡೇ ಬಗೆಯದು - ಕಂದ, ಜೊತೆಗೆ ಯಾವುದಾದರೂ ಒಂದು ಪ್ರಸಿದ್ಧ ವೃತ್ತ. ಹೆಚ್ಚಿನ ವೈವಿಧ್ಯಕ್ಕೆ ಇಲ್ಲಿ ಅವಕಾಶವಿಲ್ಲ. ಅಂತೂ ಕವಿರಾಜಮಾರ್ಗ - ಕಾವ್ಯಾವಲೋಕನ ಈ ಎರಡರ ಮತದಂತೆಯೂ ಬೆದಂಡೆಯಲ್ಲಿ ಕಂದಗಳೂ ನಡುನಡುವೆ ಒಂದೇ ಜಾತಿಯ ವೃತ್ತಗಳೂ ಸೇರಿ ಬಂದಿರಬೇಕೆಂದು ನಿರ್ಣಯಿಸಬಹುದು" (ಪ್ರಬುದ್ಧ ಕರ್ನಾಟಕ, ಸಂಪುಟ ೪೪, ಸಂಚಿಕೆ ೪, ಪುಟ ೮೭-೮೮) ಎಂದಿರುವರಾಗಿ ಪೂಜ್ಯ ತೀ.ನಂ.ಶ್ರೀ.ಯವರು ಕವಿರಾಜಮಾರ್ಗದ ಆ ೩೪ನೇ ಕಂದಪದ್ಯದೊಳಗಣ ಜಾತಿ ಎಂಬ ಪದವು ವಿಧ ಎಂಬ ಸಾಮಾನ್ಯಾರ್ಥವಾಹಿಯಾಗಿರದೆ - ಸಂಗೀತಶಾಸ್ತ್ರದ ಒಂದು ಪರಿಭಾಷೆಯಾಗಿದೆ ಎಂಬುದನ್ನು ಗುರುತಿಸಲಿಲ್ಲ. ಅವರು "ಜಾತಿ" ಎಂಬುದರ ಅರ್ಥಗ್ರಂಥಿಯನ್ನು ದೃಷ್ಟಿಸದೆ - ಅದು ಬಿಡುವತ್ತ ಬಿಡಿಸದೆ - ಮನ ಬಂದತ್ತ ಎಳೆಯನ್ನು ತುಯ್ದೆಳೆದರು - ಫಲಿತಾಂಶ: ಅದು ಕಗ್ಗಂಟಾಯಿತು. ಪ್ರಸ್ತುತ ೩೪ನೇ ಕಂದಪದ್ಯದ ಪ್ರಕಾರ "ಬೆದಂಡೆಯಲ್ಲಿ ಕಂದಗ ಜೊತೆಗೆ ಬಳಸುವ ವೃತ್ತಗಳಲ್ಲಿ ವೈವಿಧ್ಯವಿರಬೇಕೇ ಬೇಡವೇ ಎಂಬುದಲ್ಲ ವಿಚಾರಣೀಯ ಅಂಶ! ಬೆದಂಡೆಗಬ್ಬದಲ್ಲಿ ಇರಬೇಕಾದುದು ಕಂದ ಮತ್ತು ವೃತ್ತಗಳು ಮಾತ್ರವೋ? ಜೊತೆಗೆ ಮೂರನೆಯದಾಗಿ (ಆ ನಡುವೆ) "ಜಾತಿ" ಎಂಬುದೂ ಇರಬೇಡವೋ? ಇರುವುದಾದರೆ ಆ "ಜಾತಿ" ಎಂಬುದರ ಪರಿಭಾಷೆ (=ಸ್ವರೂಪ) ಏನು ಎಂಬುದು! ಕವಿರಾಜಮಾರ್ಗದ ಪ್ರಕಾರ- ಚತ್ತಾಣ ಬೆದಂಡೆ ಎಂಬ ಎರಡು ಪದ್ಯಕಾವ್ಯಪ್ರಕಾರಗಳಲ್ಲೂ ಕಂದ-ವೃತ್ತಗಳಿರಬೇಕೆನ್ನುವುದು ಸಮಾನಾಂಶ. ಹೀಗಿರುವಲ್ಲಿ ಕಂದವೃತ್ತಗಳ ಜೊತೆಗೆ ಅಕ್ಕರ ಚೌಪದಿ ಗೀತಿಕೆ ತ್ರಿಪದಿಗಳು ಸೇರ್ಪಡೆಯಾಗಿದ್ದರೆ "ಚತ್ತಾಣ"ವೆನಿಸಿ - ಆ ಅಕ್ಕರ ಚೌಪದಿ ಗೀತಿಕೆ ತ್ರಿಪದಿಗಳಿಗೆ ಬದಲಾಗಿ "ಜಾತಿ" ಎಂಬುದು ಸೇರ್ಪಡೆಯಾಗಿದ್ದರೆ "ಬೆದಂಡೆ" ಎನಿಸಿಕೊಳ್ಳುವುದೆಂಬುದು ಕವಿರಾಜಮಾರ್ಗಕಾರನ ೧-೩೪ನೇ ಮಾತಿನ ಮುಖ್ಯಾರ್ಥ! ಹಾಗಾದರೆ ಚತ್ತಾಣದಿಂದ ಬೆದಂಡೆಯನ್ನು ಬೇರ್ಪಡಿಸುವ ವಿಶಿಷ್ಟಾಂಶವಾದ "ಜಾತಿ" ಎಂದರೇನು? ಈಗ ಅದರತ್ತ ನಮ್ಮ ವಿಚಾರವನ್ನು ಹೊರಳಿಸಬಹುದು: ನೇಮಿಚಂದ್ರನ ಒಂದು ಪದ್ಯವನ್ನು ನೋಡಿರಿ - ಲೀಲಾವತಿಯ ಬಳಿಗೆ ಅವಳ ಪ್ರಿಯತಮನಾದ ಕಂದರ್ಪನನ್ನು ಕರೆತಂದ ಪರಿಯನ್ನು ವರ್ಣಿಸಿರುವ ಸಂದರ್ಭವದು: ರತಿಗಳ್ ಶೃಂಗಾರಮಂ, ಶೋಭೆಗಳತಿಶಯಮಂ ಜಾತಿಗಳ್ ರಾಗಮಂ, ದೇ ವತೆಗಳ್ ಕಾಮ್ಯಾರ್ಥಮಂ, ನೀತಿಗಳುದಯಮನಾಕ್ಷೇಪದಿಂ ತರ್ಪವೋಲು | ದ್ಧತೆಯರ್ ತತ್‌ಕಾಂತೆಯರ್ಕಳ್ ತರೆ - ಮಧು ಸಹಿತಂ ಕಂತು ಬರ್ಪಂತೆ ಬಂದಂ ಚತುರಾಮಾತ್ಯ ಪ್ರಯುಕ್ತಂ ಸರಸಕೃತಿ ಕಲಾ ನರ್ತಕೀ ನೃತ್ಯರಂಗಂ || (ಲೀಲಾವತಿ ೧೧.೯೫) ರತಿಯು ಶೃಂಗಾರವನ್ನೂ, ಶೋಭೆಗಳು ಅತಿಶಯವನ್ನೂ, ಜಾತಿಯು ರಾಗವನ್ನೂ..... ಒಡಗೊಂಡು ಬರುವಂತೆ ಸಖೀನಿವಹವು ಕಂದರ್ಪನನ್ನು ಕರೆತಂದಿತೆಂಬುದೇ ಈ ಮೇಲಣ ಪದ್ಯದ ತಾತ್ಪರ್ಯ. ಇಲ್ಲಿ "ಜಾತಿ" ಎಂದರೆ - ಬೇರೆಬೇರೆ ರಾಗದೊಡಗೂಡಿದ "ವಾಗ್ಗೇಯ"ದ ಒಂದು ಬಂಧವಿರಬಹುದೆಂದು ಊಹಿಸುವುದು ಅಸಂಗತವಾಗಲಾರದು. ಬದಲಾಗಿ ಸಮಂಜಸವೆನಿಸಿ - "ಜಾತಿ" ಎಂಬುದರ ಅರ್ಥವಿವರ ದೊರೆತು ಬೆದಂಡೆಯ ಸ್ವರೂಪವು ಇನ್ನೂ ನಿಚ್ಚಳವಾಗಬೇಕಾದರೆ - ಅದೇ ಬೆದಂಡೆಯನ್ನು ಕುರಿತು ಪ್ರಸ್ತಾಪಿಸಿರುವ ನಾಗವರ್ಮನ ಕಾವ್ಯಾವಲೋಕನದ ಮುಂದಿನ ಮೂರು ಪದ್ಯಗಳನ್ನು ನೋಡಬಹುದು: ಸಂದಿಸಿರೆ ಕಂದಮುಂ ಪೆಱ ತೊಂದಱಕೆಯ ವೃತ್ತ ಜಾತಿಯುಂ, ಪದಮವು ತ ಳ್ತೊಂದಿರೆ ಪನ್ನೆರಡುವರಂ - ಸಂದುದು ಮೆಲ್ವಾಡೆನಿಕ್ಕುಮದು ಕನ್ನಡದೊಳ್ (೯೫೨) ಪದಿನಯ್ದುಮಿರ್ಪತಯ್ದುಂ ಪದಂ ಯಥಾಸಂಭವಂ ಪ್ರಬಂಧದ ಮೆಯ್ಯೊಳ್ ಪುದಿದೊದವಿ ನೆಗೞ್ವೊಡಂತದು ಸದಲಂಕಾರಂ ರಸಾಸ್ಪದಂ ಪಾಡಕ್ಕುಂ (೯೫೩) ಪಾಡುಗಳಿಂದಂ ತಱಸಲೆ ಮಾಡಿದುದಂ ಪಾಡುಗಬ್ಬಮೆಂದು ಬುಧರ್ ಕೊಂ ಡಾಡುವರಿನ್ನದು ದಲ್ ಮೆ ಲ್ವಾಡುಂ ರೂಢಿಯ ಬೆದಂಡೆಗಬ್ಬಮುಮಕ್ಕುಂ (೯೫೪) ಅರ್ಥಸ್ಪಷ್ಟತೆಗಾಗಿ ಮೇಲಣ ಮೂರೂ ಪದ್ಯಗಳ ಗದ್ಯಾನುವಾದ ಈ ಮುಂದಿನಂತಿದೆ ನೋಡಿ: ಕಂದವೂ ಇನ್ನೊಂದು ಪ್ರಸಿದ್ಧ ವೃತ್ತವೂ (ಮತ್ತು ಆ ಎರಡರ ನಡುವೆ) "ಪದ"ಗಳು ಸಂಖ್ಯೆಯಲ್ಲಿ ಹನ್ನೆರಡರವರೆಗೆ ಸೇರಿಕೊಂಡಿದ್ದರೆ - ಅದು ಕನ್ನಡದಲ್ಲಿ ಮೆಲ್ವಾಡು ಎನಿಸಿಕೊಳ್ಳುವುದು. (೯೫೨) ಆ ಕಂದ ಮತ್ತು ವೃತ್ತದ ನಡುವೆ - "ಪದ"ಗಳು ಸಂಖ್ಯೆಯಲಿ ಹದಿನೈದು - ಇಪ್ಪತ್ತೈದರವರೆಗೆ ಸೇರಿಕೊಂಡಿದ್ದರೆ (ಅದು ಕನ್ನಡದಲ್ಲಿ) ಪಾಡು-ಪದ- ಅಥವಾ ಹಾಡು ಎನಿಸುವುದು. (೯೫೩) ಪಾಡುಗಳಿಂದ ರಚಿತವಾದುದನ್ನು ವಿದ್ವಾಂಸರು "ಪಾಡುಗಬ್ಬ"ವೆಂದು ಕೊಂಡಾಡುವರು. ಈ ಪಾಡು ಅಥವಾ ಪಾಡುಗಳಿಂದಲೇ ಅಲ್ಲವೇ ಮೆಲ್ವಾಡು ಅಥವಾ "ಬೆದಂಡೆಗಬ್ಬ"ವಾಗುವುದು! (೯೫೪) ನಾಗವರ್ಮನ ಈ ಮೇಲಣ ವಿವರಣೆಯು ಕವಿರಾಜಮಾರ್ಗದಲ್ಲಿನ ಬೆದಂಡೆಯ ಲಕ್ಷಣವನ್ನು ಹೇಳುವ ಪದ್ಯಕ್ಕೆ ಬರೆದ ವ್ಯಾಖ್ಯಾನದಂತಿದೆ. ಬೆದಂಡೆಯೆನಿಸಬೇಕಾದರೆ ಕಂದ ವೃತ್ತಗಳ ಜೊತೆಗೆ "ಜಾತಿ" ಕೂಡಿಕೊಂಡು ಬರಬೇಕೆಂದು ಕವಿರಾಜಮಾರ್ಗಕಾರನು ಹೇಳಿದ್ದರೆ - ಪದ ಕೂಡಿಕೊಂಡು ಬರಬೇಕೆಂದು ಕಾವ್ಯಾವಲೋಕನಕಾರನು ಹೇಳಿರುವನಾದ್ದರಿಂದ - "ಜಾತಿ"ಗೆ "ಪದ"ವು ಪರ್ಯಾಯವಾಚಿಯೆಂಬುದು ಸ್ವತಸ್ಸಿದ್ಧವಾಗಿದೆ. ಪದವೆಂಬುದು ಹಾಡು ಅಥವಾ ಹಾಡಲೆಂದೇ ರಚಿತವಾದ ಅದಕ್ಕನುಸಾರವಾಗಿ ಛಂದಸ್ಸಹಿತವಾದ ಒಂದು ಸಾಹಿತ್ಯಬಂಧವೆಂಬುದಕ್ಕೆ ನಡುಗನ್ನಡದಲ್ಲಿ ಪ್ರಯೋಗಗಳು ಹೇರಳವಾಗಿವೆ. ಆದರೆ ಇದೇ ಅರ್ಥದಲ್ಲಿ "ಪದ" ಎಂಬ ಶಬ್ದವು ಕವಿರಾಜಮಾರ್ಗದ ಕಾಲಕ್ಕೂ (ಅದಕ್ಕಿಂತ ಹಿಂದಕ್ಕೂ) ಪ್ರಯೋಗವಾಗುತ್ತಿತ್ತೇ ಎಂಬ ಸಂದೇಹ ಬರುವುದು ಸಹಜ. ಆದರೆ ಈ ಸಂದೇಹವು ಸ್ಥಾಯಿಯಾಗುವಷ್ಟು ಪ್ರಬಲವಾದುದಲ್ಲ - ಕಾಳಿದಾಸನ ಮೇಘಸಂದೇಶದ ಉತ್ತರ ಭಾಗದಲ್ಲಿ ಬರುವ ಈ ಮುಂದಿನ ಪದ್ಯವೊಂದೇ ಅದನ್ನು ನಿವಾರಿಸುವುದು: ಉತ್ಸಂಗೇ ವಾ ಮಲಿನ ವಸನೇ ಸೌಮ್ಯ ನಿಕ್ಷಿಪ್ಯ ವೀಣಾಂ ಮದ್ಗೋತ್ರಾಂಕಂ ವಿರಚಿತಪದಂ ಗೇಯ ಮುದ್ಗಾತುಕಾಮಾ ತಂತ್ರೀಮಾರ್ಧ್ರಾಂ ನಯನ ಸಲಿಲೈಃ ಸಾರಯಿತ್ವಾ ಕಥಂಚಿತ್ ಭೂಯೋ ಭೂಯಃ ಸ್ವಯಮಪಿ ಕೃತಾಂ ಮೂರ್ಛನಾಂ ವಿಸ್ಮರಂತೀ! ಇಲ್ಲಿ ಯಕ್ಷಿ (ವಿರಹಿಣಿ)ಯು ತನ್ನ ಪ್ರಿಯತಮನ ಗೋತ್ರಾಂಕಿತ ಸಹಿತವಾದ "ಪದ"ವೊಂದನ್ನು ರಚಿಸಿ ತಂತ್ರೀವಾದ್ಯದೊಡನೆ ಹಾಡಬೇಕೆಂದಿದ್ದ ವಿಚಾರ ಸ್ಪಷ್ಟವಿದೆ. (ಇದೇ ಸಂದರ್ಭದಲ್ಲಿ ಶಿವದಾಸರ ಹರಿದಾಸರ ಮತ್ತು ೧೭ನೇ ಶತಮಾನದ ವೈಷ್ಣವ ಭಕ್ತರ ಹಾಡುಗಳನ್ನು "ಪದ"ವೆಂದು ವ್ಯವಹರಿಸುತ್ತಿದ್ದುದನ್ನೂ ನೆನೆಯಬೇಕು.) ನಿರ್ಧರಿಸಿ ಹೇಳುವುದಾದರೆ - ಮುಖ್ಯವಾಗಿ ಹಾಡುಗಳಿಂದ ರಚಿತವಾದ ಕಾವ್ಯಕ್ಕೆ ಅಥವಾ ಗೇಯ ಕೃತಿಗೆ "ಬೆದಂಡೆ" ಎನ್ನುತ್ತಿದ್ದರು. ತಿರುಮಲಾರ್ಯನು ತನ್ನ ಚಿಕ್ಕದೇವರಾಜ ವಿಜಯದ ವೇಶ್ಯಾವಾಟಿಕಾ ಪ್ರಸಂಗದಲ್ಲಿ ಪ್ರಸ್ತಾಪಿಸಿರುವ ಬಣ್ಣವಾಡು ಸಿಂಗರವಾಡು ಅಥವಾ ಶೃಂಗಾರ ಪದ ಎಂಬುದನ್ನು ಗಮನಿಸಿದರೆ- ಅವು ಬೇರೇನೂ ಅಲ್ಲದೆ ಸೂಳೆಯರು ಹಾಡುತ್ತಿದ್ದ ಗೀತಾ ಪ್ರಬಂಧಗಳೇ ಆಗಿದ್ದವೆಂದೂ - ಅವು ಬೆದಂಡೆಯ ಅವಶೇಷಗಳೋ ಅಪಭ್ರಂಶಗಳೋ ಆಗಿದ್ದವೆಂದೂ ಅನ್ನಿಸದಿರದು. ಈ ಬೆದಂಡೆಗಬ್ಬವು ಹೀಗೆ ಶೃಂಗಾರ ಪ್ರಧಾನವಾದ ಗೇಯಕೃತಿ ಯಾಗಿದ್ದುದರಿಂದಲೂ, ಅದನ್ನು ಹೆಚ್ಚಾಗಿ ವೇಶ್ಯಾವಾಟಿಕೆಗಳಲ್ಲೇ ಹಾಡುತ್ತಿದ್ದು ದರಿಂದಲೂ - ಗರತಿಯರೂ ಗೊರವರೂ ಬೆದಂಡೆಗೆ ಕಿವಿಗೊಡಬಾರದೆಂಬ ನೀತಿವಾಕ್ಯ ಪ್ರಚುರವಾಯಿತು. ಮದನತಿಲಕವೆಂಬ ಶೃಂಗಾರಕಾವ್ಯದಲ್ಲಿಯೇ - ಬೆದಂಡೆಯನ್ನು ಹಾಡುವ ಕಡೆ ಹೆಂಡಿರನ್ನು ಸುಳಿಯಲೂ ಬಿಡಬಾರದೆಂದು ಎಚ್ಚರಿಸಲಾಗಿದೆ - "ಬೆದಂಡೆಯ ದೆಸೆ ಬೊಗಲೀಯಲಾಗದು" ಎಂದು (ಮ.ತಿಲಕ ೮.೨೯). ಒಟ್ಟಿನ ಮೇಲೆ ಕವಿರಾಜಮಾರ್ಗದ ಪ್ರಕಾರ ೯ನೇ ಶತಮಾನಕ್ಕಿಂತ ಹಿಂದಿನಿಂದಲೂ ಕರ್ನಾಟಕದಲ್ಲಿ ಮೆಲ್ವಾಡೆಂದೋ ಬೆದಂಡೆಯೆಂದೋ ಪ್ರಚುರವಾಗಿದ್ದ ಗೀತಾಸಾಹಿತ್ಯ ಪ್ರಕಾರವನ್ನು ವಸ್ತು ದೃಷ್ಟಿಯಿಂದ ಕಾಮದಿಂದ ದೈವಭಕ್ತಿಗೋ ಧರ್ಮಸಿದ್ಧಾಂತಕ್ಕೋ ತಿರುಗಿಸಿ ಕಡೆಯ ಪಕ್ಷ ಕ್ರಿ.ಶ.೮-೯ನೇ ಶತಮಾನದಿಂದ ಹಿಡಿದು ೧೮-೧೯ನೇ ಶತಮಾನದವರೆಗೆ ಸುಮಾರು ಒಂದು ಸಾವಿರ ವರ್ಷಗಳ ಕಾಲ ಸ್ವರವಚನವೆಂದೋ ವಚನವೆಂದೋ ಶಿವಶರಣರೂ, ಕೀರ್ತನೆಯೆಂದೋ ಉಗಾಭೋಗವೆಂದೋ ಹರಿದಾಸರೂ- ಕರ್ನಾಟಕ ಮಾತ್ರವಲ್ಲ ಆಸೇತು ಹಿಮಾಚಲ ಭಾರತವು ಪರಕೀಯ ಧಾಳಿಗಳಿಂದ ಕಂಗೆಟ್ಟಿದ್ದ ಕಾಲದಲ್ಲಿ ನಮ್ಮ ಸಂಸ್ಕೃತಿಯನ್ನು ರಕ್ಷಿಸಿ ಕೊಳ್ಳುವುದಕ್ಕಾಗಿ ಬೇಕಾದ ಆತ್ಮಸ್ಥೈರ್ಯವನ್ನೂ ಶೌರ್ಯವನ್ನೂ ಜನತೆಗೆ ಕೊಟ್ಟಿತು - ಈ ಶರಣ ಮತ್ತು ಹರಿದಾಸ ಪರಂಪರೆ. ಇದೇ ರೀತಿ ಬರುವ ನೂರಾರಲ್ಲ ಸಾವಿರಾರು ವರ್ಷಗಳ ಕಾಲವೂ ನಮ್ಮ ದೇಶವನ್ನು, ನಮ್ಮ ದೇಶೀಯ ಸಂಸ್ಕೃತಿಯನ್ನು ರಕ್ಷಿಸಿಕೊಂಡು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಭಾಷೆ - ಸಾಹಿತ್ಯ - ಕಲೆ ಎಂದು ಮುಂತಾದ ಉಪಕರಣಗಳ ಕಡೆ ನಾವು ಸರಿದಾರಿಯಲ್ಲಿ ಗಮನ ಹರಿಸಬೇಕಾಗಿದೆ: ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘಗಳು ಆಧುನಿಕ ಕನ್ನಡ ನಾಡು-ನುಡಿ- ಸಾಹಿತ್ಯ ಪರಂಪರೆಯ ಎರಡು ಕಣ್ಣುಗಳು. ಇವುಗಳ ಮುಖ್ಯ ದೃಷ್ಟಿ ಕರ್ನಾಟಕದ ಏಕೀಕರಣವೆಂಬುದೂ - ಅದು ಸಾಧಿತವಾಗಿರುವುದೂ ಈಗ ಇತಿಹಾಸ. ಆ ಕಾಲದ ಒತ್ತಾಸೆಯಿಂದ ನಾಡಿನ ಮಹನೀಯರು ಕಟ್ಟಿದ ಮಹತ್ವದ ಸಂಸ್ಥೆಗಳಿವು. ಶತಮಾನದ ಸಂಭ್ರಮದ ಅಂಚಿನಲ್ಲಿರುವ ಈ ಮಹಾನ್ ಸಂಸ್ಥೆಗಳು ಈ ವೇಳೆಗಾಗಲೇ ನಾಡಿನ ಸಾರ್ವಭೌಮ ಸಂಸ್ಥೆಗಳಾಗಿ ಬೆಳೆಯಬೇಕಾಗಿತ್ತು; ಆದರೆ ಜನತೆ- ಮುಖ್ಯವಾಗಿ ಸರಕಾರ ವ್ಯವಸ್ಥಿತವಾಗಿ ಅವನ್ನು ಬೆಳೆಸುವ ಬದಲು ಕಾಲಕ್ರಮೇಣ ಕಡೆಗಣಿಸುತ್ತ ಬಂದದ್ದು ಬಹಳ ಆಶ್ಚರ್ಯಕರವಾದ ಮತ್ತು ದುರದೃಷ್ಟಕರವಾದ ಸಂಗತಿ! ಬದಲಾದ ಸನ್ನಿವೇಶಗಳಿಗನುಗುಣವಾಗಿ ಅವನ್ನು ಬಲಪಡಿಸುತ್ತ ಬಂದಿದ್ದರೆ - ಇಂದು ಅವು ಮೂಲೆಗುಂಪಾಗುವ ಸ್ಥಿತಿಗೆ ಬರುತ್ತಿರಲಿಲ್ಲ. ಅಲ್ಲಿ ಕಾರ್ಯಗತಗೊಳಿಸಬಹುದಾಗಿದ್ದ ಯೋಜನೆಗಳನ್ನು ಸರಕಾರ ಒಂದೊಂದಾಗಿ ತನ್ನ ಕಡೆಗೆ ವರ್ಗಾಯಿಸಿಕೊಳ್ಳುತ್ತ ಬಂದಿದ್ದರಿಂದ - ಹೊಸ ಹೊಸ ಹೆಸರಿನ ಸರಕಾರೀ ಸಂಸ್ಥೆಗಳು ಹುಟ್ಟಿಕೊಂಡಂತಾಯಿತೇ ಹೊರತು - ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳ ವಿಕಾಸ ಸಾಧ್ಯವಾಗಲಿಲ್ಲ. ಅಂದರೆ - ಸರಕಾರ ಹೊಸದಾಗಿ ಹುಟ್ಟು ಹಾಕಿದ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಚಟುವಟಿಕೆಗಳು ಸರಕಾರೀಕರಣಗೊಂಡು ಜನದೂರವಾಗಿ ಕನ್ನಡ ಸಂಬಂಧವಾದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯಲಾರದೆ ಹೋದವು. ಕೆಲವೇ ಆಯ್ದ ಲೇಖಕರ ಕೃತಿಗಳ ಪ್ರಕಟಣೆ, ಕೆಲವೇ ಬಗೆಯ ವಿಚಾರ ಸಂಕಿರಣ, ಅಪೂರ್ಣ ಗಡಿವೀಕ್ಷಣೆ, ಕನ್ನಡ ಆಡಳಿತ ಭಾಷಾನೀತಿಯ ಅಸಮರ್ಪಕ ನಿರ್ವಹಣೆ, ಅನಿಯಂತ್ರಿತ ಪ್ರಶಸ್ತಿ-ಪುರಸ್ಕಾರ ಪ್ರದಾನ - ಇವಿಷ್ಟೆ ತಾನೆ ಅಲ್ಲಿ ನಡೆಯುತ್ತಿರುವ ಕೆಲಸಗಳು? ಈ ಯೋಜನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಿಗೆ ಹಂಚಿಕೊಟ್ಟು ಕನ್ನಡ ಜನತೆಯ ಕೈಗಳನ್ನು ಬಲಪಡಿಸಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ; ಕನ್ನಡದ ಪರಿಚಾರಿಕೆಯನ್ನು ಕೈಗೊಂಡಿರುವ ಸರಕಾರದ ಸಂಸ್ಥೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವ್ಯಾಪ್ತಿಯಲ್ಲಿ ತಂದರೆ ಹೇಗೆ ಎಂಬುದು ಚರ್ಚಾಸ್ಪದವಾಗುವ ಪ್ರಮೇಯವೇ ಇರುವುದಿಲ್ಲ. ಈ ವಿಲೀನ ಪ್ರಕ್ರಿಯೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಿಗೆ ತನ್ನ ತಾನೇ ಹೊಸ ಶಕ್ತಿ ಬಂದಂತಾಗುತ್ತದೆ; ಯೋಜನೆಗಳ ನಿರ್ಬಲೀಕರಣವೂ ತಪ್ಪುತ್ತದೆ. ಅಧಿಕೃತ ಸಂಸ್ಥೆಗಳು ಮಾಡಬಹುದಾದ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧವಾದ ಸುಧಾರಣೆಯ ಕೆಲಸ ಕಾರ್ಯಗಳನ್ನು ಸಾರ್ವಜನಿಕ ಕ್ರಿಯಾಶಕ್ತಿಗೆ ಒಳಪಡಿಸದೆ, ಸರಕಾರೀಕರಣ ಮಾಡುವುದು ಪ್ರಜಾಪ್ರಭುತ್ವಕ್ಕೇ ವಿರುದ್ಧವಾದ ರೀತಿ-ನೀತಿ. ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳಂತಹ ಶುದ್ಧ ಜನಪರ ಸಂಸ್ಥೆಗಳು ತಮ್ಮ ಜಾಯಮಾನದಿಂದಲೇ ಈ ಕನ್ನಡಪರ ಕಾರ್ಯಗಳನ್ನು ಎಷ್ಟು ನವೋನವ ಉತ್ಸಾಹದಿಂದಲೂ ಜನಸಮ್ಮತಿಯಿಂದಲೂ ನಡೆಸಬಹುದಾಗಿತ್ತೋ ಅದಕ್ಕೆ ಬದಲಾಗಿ ಅನಿರೀಕ್ಷಿತ ಬದಲಾವಣೆ ತಾಳಿ ಜನದೂರ ಕಾರ್ಯವೈಖರಿಗಳಿಗೆ ಒಳಗಾಗುವ ಅಪಾಯದಿಂದ ಪಾರಾಗಬಹುದಾಗಿತ್ತು. ಸಾಹಿತ್ಯವನ್ನು ಭಾಷೆಯನ್ನು ಕುರಿತಂತೆ, ಗಡಿನಾಡಿನ ಜನಗಳ ದಿಕ್ಕು ದೆಶೆ ಕುರಿತಂತೆ, ಇಡಿಯಾಗಿ ಅಕ್ಕಪಕ್ಕದ ಭಾಷೆ ಪ್ರಾಂತ್ಯ ಸಂಬಂಧವಾಗಿ ಮಾಡಬಹುದಾದ ಪರಸ್ಪರ ಕಾರ್ಯಗಳು ಕಾಲಕಾಲಕ್ಕೆ ನಿರೀಕ್ಷಿತ ರೀತಿಯಲ್ಲಿ, ಪ್ರಮಾಣದಲ್ಲಿ ನಡೆಯದೆ ಹೋಗಿವೆ. ಈ ಎಲ್ಲಾ ಕೊರತೆಗಳಿಗೆ, ಅಪಾಯಗಳಿಗೆ ಇನ್ನಾದರೂ ಆಸ್ಪದ ಕೊಡದೆ, ಮೇಲೆ ಹೇಳಿದ ಸಂಘ ಸಂಸ್ಥೆಗಳಿಗೆ ಈ ಕಾರ್ಯಭಾರವನ್ನು ಧಾರೆಯೆರೆದು ಕೊಡುವುದು ಶುಭಕಾರ್ಯವೆ ಆಗಿದೆ. ವಾಸ್ತವವಾಗಿ ನಾವು ಈ ವಿಷಯಗಳ ಸಂಬಂಧವಾಗಿಯೇ ಖಾಸಗೀಕರಣ ಮತ್ತು ಉದಾರೀಕರಣ ತತ್ವಗಳನ್ನು ಅರ್ಥಮಾಡಿ ಕೊಳ್ಳಬೇಕಾಗಿದೆ. ಆಗ ಕನ್ನಡಿಗರು ಅಧಿಕೃತವಾಗಿ ತಮ್ಮ ಕನಸಿನ ಸಂಸ್ಥೆಗಳಾದ ಪರಿಷತ್ತು, ವಿದ್ಯಾವರ್ಧಕ ಸಂಘಗಳ ಮೂಲಕ ತಮ್ಮ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಜವಾಬ್ದಾರಿಗಳನ್ನು ತಾವೇ ನೇರವಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಕಾರ ವ್ಯವಸಾಯ, ಕಂದಾಯ, ಅಬಕಾರಿ, ಲೋಕೋಪಯೋಗಿ ಮತ್ತಿತರ ವ್ಯವಹಾರಿಕ -ಅವಶ್ಯಕ ಕರ್ತವ್ಯಗಳಲ್ಲಿ ತೊಡಗಿರಲಿ. ಹೀಗಾದರೆ ಜನರ ಆಶೋತ್ತರಗಳನ್ನು, ಆವೇಶಗಳನ್ನು, ಕನಸು ಮನಸುಗಳನ್ನು ನೋಯಿಸದೆ ನೆರವೇರಿಸಲು ಅನುವಾಗುತ್ತದೆ. ಸರಕಾರ ಪ್ರವೇಶ ಮಾಡಬಾರದಂತಹ, ದೂರನಿಂತು ಗೌರವದಿಂದ ಪ್ರೋತ್ಸಾಹ ನೀಡಬೇಕಾದಂತಹ ರೀತಿ ಇದಾಗುವುದಿಲ್ಲವೆ? ಸಾಹಿತ್ಯವೆನ್ನುವುದು ಸರಕಾರದಿಂದ ನಿರ್ಣಯವಾಗುವಂಥದ್ದಲ್ಲ. ಅದು ತೀರ ಭಾವನಾತ್ಮಕವಾz ವಿಚಾರ. ಇವನ್ನೆಲ್ಲ ನೇರವಾಗಿ ಜನತೆ ತನ್ನ ಸಂಘಸಂಸ್ಥೆಗಳ ಮೂಲಕ ತಾನೇ ನಿರ್ವಹಿಸಿಕೊಳ್ಳಬೇಕಾದ್ದು. ಹಲವು ಧಾರ್ಮಿಕ ವಿಚಾರಗಳಿಗೆ ಇಂದೂ ಕೂಡ ಸರಕಾರ ಪ್ರವೇಶ ಮಾಡುವುದು ಹೇಗೆ ಸಾಧ್ಯವಿಲ್ಲವೋ ಹಾಗೆ! ಆದ್ದರಿಂದ ಇಂತಹ ಭಾವನಾತ್ಮಕ, ಆವೇಶಭರಿತ ವಿಷಯಗಳ ಗೊಡವೆಗೆ ಹೋಗದಿರುವುದು ಜನಕ್ಕೂ; ಜನಪರ ಅಭಿವೃದ್ಧಿಗಾಗಿ ನಡೆಯುತ್ತಿರುವ ಸರಕಾರಗಳಿಗೂ ಶೋಭೆ ತರುವಂಥದ್ದು. ಈ ಕೆಲಸ ಅಂದರೆ - ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪಾಧಿಕಾರ, ಪುಸ್ತಕ ಪ್ರಾಧಿಕಾರ ಮತ್ತು ಸಂಸ್ಕೃತಿ ಇಲಾಖೆ - ಇವನ್ನೆಲ್ಲಾ ಸರಕಾರ ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳಿಗೆ ವರ್ಗಾಯಿಸುವುದು ಅಗತ್ಯ. ಈ ಸಂಸ್ಥೆಗಳನ್ನು ಎರಡು ಸ್ವಾಯತ್ತ ವಿಶ್ವವಿದ್ಯಾನಿಲಯಗಳನ್ನಾಗಿ ಪರಿವರ್ತಿಸಲಿ. ಆಗ ಕನ್ನಡ ಭಾಷೆ- ಸಾಹಿತ್ಯ- ಸಂಸ್ಕೃತಿಗಳ ಅಭಿವೃದ್ಧಿ ಇತೋಪ್ಯತಿಶಯವಾಗಿ ನಡೆಯುತ್ತದೆ. ಕಾಲಕ್ರಮದಲ್ಲಿ ಅವು ಸ್ವತಂತ್ರ ಜನತಾ ಸಂಸ್ಥೆಗಳಾಗಿ ಬೆಳೆದು ದೇಶ ವಿದೇಶ; ಇಡಿಯಾಗಿ ವಿಶ್ವದಲ್ಲಿ ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿ ಪ್ರಸಾರ ಕಾರ್ಯಗಳನ್ನು ಕೈಗೊಳ್ಳಲು ಸಮರ್ಥವಾಗುತ್ತವೆ. ನಾನು ಈ ವೇದಿಕೆಯಿಂದ ನನಗೆ ಅತ್ಯಂತ ಗೌರವ ಪಾತ್ರರಾದ ಕನ್ನಡ ಜನತೆಯನ್ನು ಈ ಸಂಬಂಧವಾಗಿ ಪ್ರಚೋದಿಸುತ್ತಿದ್ದೇನೆ; ಇರುವ, ಬರುವ ಸರಕಾರಗಳನ್ನು ಪ್ರೀತಿಯಿಂದಲೇ ಎಚ್ಚರಿಸುತ್ತಲೂ ಇದ್ದೇನೆ. ಪ್ರೀತಿಯ ಮಕ್ಕಳು ತಮ್ಮ ಖಾಸಾ ಜವಾಬ್ದಾರಿಗಳನ್ನು ನಿರ್ವಹಿಸಿಕೊಳ್ಳಲು ಉತ್ಸುಕರೂ ಸಮರ್ಥರೂ ಆಗಿರುವರು ಎಂದಾಗ ಯಜಮಾನರಂತಹ ಸರಕಾರಗಳು ಮೆಚ್ಚಿ ಅದಕ್ಕೆ ಪ್ರೋತ್ಸಾಹ ಕೊಡದಿದ್ದರೆ ಹೇಗೆ? * * * * * ನಾನು ಹಿಂದೆ ಹೇಳಿದಂತೆ ಶಿವಶರಣರು ಹರಿದಾಸರು ತಮ್ಮ ಸಾಹಿತ್ಯದಿಂದ ಒಂದು ಸಾವಿರ ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಸುಧಾರಣೆಯ ಕೆಲಸವನ್ನು ಒಟ್ಟಾರೆಯಾಗಿ ಈಗ ಸಾಹಿತಿಗಳು ಸಾಧಿಸಲಾಗದಿರುವುದಕ್ಕೆ ಕಾರಣವೇನು? ನಮಗೆ ಬಹಳ ಪೂಜ್ಯನಾದ ಸಂತನಾದ ಜೀವಿತಾದರ್ಶದ ಪ್ರತೀಕರೂಪವಾದ ಸಾಹಿತಿ ಯಾರು ಎಂದರೆ- ಕುವೆಂಪು ಅವರೆಂದೊ ಬೇಂದ್ರೆಯವರೆಂದೊ ಕೈಬೆರಳೆಣಿಕೆಯಷ್ಟು ಜನ ಸಿಗಬಹುದು. ಆದರೆ ಈ ಕಲಿಗಾಲಕ್ಕೆ ಅದೂ ಸಾಲದು. ಮತ್ತು ಆಧುನಿಕ ಪಂಥಗಳು ಶರಣ-ಹರಿದಾಸ ಪಂಥಗಳಷ್ಟು ಸಾಮಾನ್ಯ ಜನತೆಯ ಮನಃಪರಿಪಾಕವನ್ನು ಕಾಲಾನುಗಣವಾಗಿ ತಿದ್ದಬಲ್ಲಂಥ ಪಂಥಗಳಾಗಲಿಲ್ಲ. ಧರ್ಮದ ಹೆಸರಿನಲ್ಲಿ ಅಂದಿನ ಶರಣ-ದಾಸ ಪಂಥಗಳು ವೈರಾಗ್ಯದ ಹೆಸರಿನಲ್ಲಿ ಕಾಯಕದ ಹೆಸರಿನಲ್ಲಿ ಭಕ್ತಿಯ ಹೆಸರಿನಲ್ಲಿ ಏನೆಲ್ಲ ತ್ಯಾಗ ಮಾಡಿ ನಿಷ್ಠೆಯಿಂದ ಜನಸೇವೆಯಲ್ಲಿ ತೊಡಗಿದವೊ ಅಂತಹ ಸಾಹಿತ್ಯ ಸಮೂಹಗಳನ್ನೆ ಇಂದು ನಾವು ಕಾಣಲಾರೆವು. ಆದ್ದರಿಂದಲೇ ಇವತ್ತಿನವರ ಸಾಹಿತ್ಯ ರಚನೆಗಳು ಕೇವಲ ಶಬ್ದಾಡಂಬರವೆನಿಸಿ ಜನ ಅವುಗಳಿಂದ ಪ್ರೇರಿತರಾಗಲಿಲ್ಲ. ಅಂಥ ಪ್ರೇರಣೆ ಉಂಟುಮಾಡಲು ಇಂದು ಹೊಸದೊಂದು ಸಾಹಿತ್ಯಪಂಥ ಜಾತ್ಯತೀತವಾಗಿ ಸರ್ವಜನಪ್ರಿಯವಾಗಿ ಜಾಗತಿಕ ಆಗುಹೋಗುಗಳ ಹಿನ್ನೆಲೆಯಲ್ಲಿ ಸಂಭಾವಿತವೂ ಆಗಿ ಮೆರೆಯಬೇಕಾಗಿದೆ. ಮತ್ತು ಅದಕ್ಕೆ ಕೆಲವು ಸೃಜನಶೀಲ ಜೀವಗಳು ನಿಷ್ಠೆಯಿಂದ ಸಂಪೂರ್ಣವಾಗಿ ಕಾಯಾ-ವಾಚಾ-ಮನಸಾ ತೆತ್ತುಕೊಳ್ಳಬೇಕು. ಮನೆಯೊಳಗೆ ಒಳ್ಳೆಯ ಮಾತನಾಡಿ ಹೊರಗೆ ಹೋಗಿ ಹೆಂಡ ಕುಡಿದು ಬಂದರೆ ಏನಾಗುತ್ತದೆ? ಸೃಜನಾತ್ಮಕ ಶಕ್ತಿಯ ಜನ ತಮ್ಮ ವಾಣಿಯಿಂದ ಅಂದರೆ ಸಾಹಿತ್ಯದಿಂದ ಜನತೆಯ ಗಮನವನ್ನು ತಮ್ಮತ್ತ ಸೆಳೆಯುವ ಅದಕ್ಕೂ ಹೆಚ್ಚಾಗಿ ತಮ್ಮಂತೆಯೆ ಪ್ರಗತಿಪರ ಕಾರ್ಯಕಲಾಪಗಳಲ್ಲಿ ತೊಡಗುವ ಸಂಕಲ್ಪವನ್ನೂ ಓದುಗರಲ್ಲಿ ಉಂಟು ಮಾಡಬೇಕು. ಮುಖ್ಯವಾಗಿ ಸಾಹಿತ್ಯ ಎನ್ನುವುದು ಒಂದು ಮಾನಸಿಕ ಸುಧಾರಣೆ. ಆ ಸುಧಾರಣೆ ಸಮಾಜದ ದೇಶದ ಉತ್ತಮಿಕೆಗೆ ಬೇಕಾದ ಕಾರ್ಯಕಲಾಪಗಳಲ್ಲಿ ಪ್ರಜೆಯನ್ನು ಪ್ರಕರ್ಷಕವಾಗಿ ತೊಡಗಿಸುವಂತಾಗಬೇಕು. * * * ಕನ್ನಡ ದೇಶ-ಭಾಷೆ-ಸಂಸ್ಕೃತಿ-ಸಾಹಿತ್ಯ ಎಂದು ಕೊಚ್ಚಿಕೊಳ್ಳುತ್ತಿರುವ ಈ ಜನ-ಕನ್ನಡವನ್ನು ಮಾತನಾಡುವ ನಾವೆಲ್ಲ ಒಂದು ಜನಾಂಗ; ಎಲ್ಲಾ ನಮ್ಮವರು; ನಮ್ಮಿಂದ ಎಲ್ಲರಿಗೂ ಮರ್ಯಾದೆ ಸಲ್ಲಬೇಕೆಂಬ ಪ್ರಾಥಮಿಕ ಪಾಠವನ್ನೇ ಕಲಿತಿಲ್ಲ. ಕನ್ನಡ ಮಾತನಾಡುವ ಜನರನ್ನು - ಅದು, ಇದು ಎಂದು ಹೆಸರಿಟ್ಟು, ಬಹಿಷ್ಕರಿಸಿ, ಅವರನ್ನು ಊರಿಂದ ಹೊರಗಿಟ್ಟು, ಅವರಿಗೆ ಮನೆಯಿಲ್ಲದೆ ಅನ್ನವಿಲ್ಲದೆ ವಿದ್ಯೆಯಿಲ್ಲದೆ ಉದ್ಯೋಗವಿಲ್ಲದೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿಟ್ಟಿರುವ ಈ ಕನ್ನಡಿಗರೆಂಬ ನಾವು ಕನ್ನಡಾಂಬೆಗೆ ಕನ್ನಡ ಸರಸ್ವತಿಗೆ ಕನ್ನಡ ಭುವನೇಶ್ವರಿಗೆ ಅವಮಾನ ಮಾಡುತ್ತಿರು ವಂತಾಗಿಲ್ಲವೇನು? ಇದು ಯಾರ ಮನಸ್ಸಿಗೂ ಬರುತ್ತಿಲ್ಲವೇನು? ತಮ್ಮಷ್ಟಕ್ಕೆ ತಾವು ಚಳಿಗಾಲದಲ್ಲಿ ಕಂಬಳಿ ಹೊದ್ದುಕೊಂಡವರಂತೆ ಬೆಚ್ಚಗೆ ಕುಳಿತಿರುವರಲ್ಲ? ಹೊಟ್ಟೆಗಿಲ್ಲದವನು ಸಾಯುತ್ತಿರುವಾಗ ಔತಣವನ್ನು ಉಂಡ ಉಂಡಾಡಿಯಂತೆ ದಲಿತರಲ್ಲದ ಜನ ನಿರಪರಾಧಿಗಳೆಂಬಂತೆ ಎಗ್ಗು-ಸಿಗ್ಗಿಲ್ಲದೆ ತಿರುಗುತ್ತಿರುವುದು ಒಂದು ಸಾಮಾಜಿಕ ಅಪಹಾಸ್ಯವಾಗಿದೆ. ಇದರಿಂದ ಪಾರಾಗುವ ಇಚ್ಛೆ ಮೇಲ್ವರ್ಗದವರಿಗೆ ಇರುವುದೇ ಆದರೆ ಅವರು ಈ ಅವಮಾನಕರವಾದ ಸಂದರ್ಭದಿಂದ ಮೊದಲು ಹೊರಬರಬೇಕು. ಈ ಸಂಬಂಧವಾಗಿಯೇ ನಾವು ಮಾಡಬಹುದಾದ ಮೊಟ್ಟಮೊದಲ ಅಡಿಪಾಯದ ರೀತಿಯ ಕಾರ್ಯಭಾರವೆಂದರೆ - ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಮಕ್ಕಳಿಗೆ ಶಿಶುವಿಹಾರದಿಂದ ಮೊದಲುಗೊಂಡು ರಾಜ್ಯಾಂಗದತ್ತವಾಗಿ ಒತ್ತಾಯ ಮಾಡಿರುವ ಹತ್ತನೆಯ ತರಗತಿಯವರೆಗೆ ಉಚಿತ-ಕಡ್ಡಾಯ-ಅತ್ಯುತ್ತಮ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಮಾಡಬೇಕು. ಈ ನಿರ್ಗತಿಕ ವರ್ಗದ ತಂದೆ-ತಾಯಿಯರು ಸ್ವತಃ ವಿದ್ಯಾವಂತರಾಗಿರುವುದಿಲ್ಲವಾಗಿ ವಾಸಿಸಲು ಯೋಗ್ಯವಾದ ಮನೆಗಳೂ ಇಲ್ಲದೆ, ಶುಚಿಯಾದ ಕೇರಿಯೂ ಇರದೆ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಅವರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಯಾವುದಾದರೂ ಶಾಲೆಗೆ ಕಳಿಸುತ್ತಾರೆ ಎಂದರೆ, ಅದು ಆಗದ ಮಾತು. ಅವರನ್ನು ಒತ್ತಾಯ ಮಾಡುವುದೆಂದರೆ- ತಿನ್ನಲು ಹುಲ್ಲು ಇಲ್ಲದ ಬಡಕಲು ಕುದುರೆಯನ್ನು ಗಾಡಿಗೆ ಕಟ್ಟಿ ಚಾಟಿಯಲ್ಲಿ ಹೊಡೆದಂತೆ ಅವಿವೇಕ, ಅನಾಗರೀಕ. ಆದ್ದರಿಂದ ಸರಕಾರ ಪ್ರತಿವರ್ಷ ಅಲ್ಲ, ಪ್ರತಿನಿತ್ಯ ಹೆಸರಿಸಲು ನಾಚುವ ಎಷ್ಟೋ ‘ಯೋಜನೆ’ಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಅಪವ್ಯಯ ಎನ್ನುವುದು ಬೇಡ- ವ್ಯಯ ಮಾಡುತ್ತಿದೆ. ಅದಷ್ಟನ್ನೂ ವಿವೇಕದಿಂದ ಇದೇ ಸರಕಾರ ಆ ವರ್ಗದ ಜನರ ಮಕ್ಕಳೆಲ್ಲ ಸುಸೂತ್ರವಾಗಿ ವಸತಿ-ಅನ್ನ-ಬಟ್ಟೆ-ವಿದ್ಯೆ-ಈ ಒಂದರಿಂದಲೂ ವಂಚಿತರಾಗದಂತೆ ಬೆಳೆಸಲು ಇರುವ ಮಾರ್ಗ ಒಂದೇ - ಅದು ಪ್ರತಿ ತಾಲ್ಲೂಕು ಮಟ್ಟದಲ್ಲಿ ಅವರಿಗೆ ಪ್ರತ್ಯೇಕವಾದ ಸುಸಜ್ಜಿತ ವಸತಿಶಾಲೆಗಳನ್ನು ತೆರೆದು ತರಬೇತಿ ಪಡೆದ ಉಪಾಧ್ಯಾಯರನ್ನು ನೇಮಿಸಿ- ಶಿಶುವಿಹಾರ, ಪ್ರಾಥಮಿಕ, ಪ್ರೌಢ ಎಂಬ ಮೂರೂ ಹಂತಗಳಲ್ಲಿ ಆ ಮಗುವಿಗೆ ಶಿಕ್ಷಣ ಕೊಡುವಂತಾಗಬೇಕು. ಈ ಕೆಲಸವನ್ನು ಮೊದಲು ಐದು ವರ್ಷ ಈ ಸರಕಾರ ಮಾಡಲಿ. ಅನಂತರ ಇದೇ ಸರಕಾರ ಆಡಳಿತಕ್ಕೆ ಬರುವುದು ಖಚಿತ. ಆ ಐದು ವರ್ಷವೂ ಆ ಸರ್ಕಾರ ಇದೇ ರೀತಿ ಅನಾಥರಕ್ಷಕವಾಗಿ ಮುಂದುವರಿದರೆ ಆಚಂದ್ರಾರ್ಕವಾಗಿ ಆ ಸರಕಾರವೇ ಆಡಳಿತದಲ್ಲಿ ಇರುತ್ತದೆ. ಈ ಮಾತು ಸರಕಾರಕ್ಕೂ ಇರಲಿ, ಜನರ ಬುದ್ಧಿಗೂ ಬರುವಂತಾಗಲಿ. ಈ ಭಾಗ್ಯೋದಯದ ಸಾರಥ್ಯವನ್ನು ನಮ್ಮ ಶ್ರೀ ಯಡಿಯೂರಪ್ಪನವರೆ ನಿರ್ವಹಿಸುವಂತಾದರೆ ನನಗಷ್ಟೆ ಅಲ್ಲ, ಇಲ್ಲಿರುವವರಿಗಷ್ಟೆ ಅಲ್ಲ, ಕರ್ನಾಟಕದಲ್ಲಿರುವ, ಹೊರನಾಡಿನಲ್ಲಿರುವ ಕೋಟ್ಯಂತರ ಕನ್ನಡಿಗರಿಗೆ ಆನಂದವಾದೀತು. ಜೈ ಕರ್ನಾಟಕ, ಜೈ ಹಿಂದ್

No comments: