Tuesday, August 31, 2010

ನಾನು, ಬಳ್ಳಾರಿ ಹಾಗು ನ್ಯೂಯಾರ್ಕ್ ಟೈಮ್ಸ್

-ನಾನು ಕೆಂಡಸಂಪಿಗೆ.ಕಾಂ ನಲ್ಲಿ ಬರೆದ ಲಲಿತ ಪ್ರಬಂಧ

ಬಳ್ಳಾರಿ ಗಣಿದಣಿಗಳ ಕುರಿತು ನ್ಯೂಯಾರ್ಕ್ ಟೈಮ್ಸ್ ನ ಜಿಮ್ ಯಾರ್ಡ್ಲಿ ಬರೆದದ್ದು ಲೋಕ ವಿಖ್ಯಾತವಾಗಿದೆ.ಆದರೆ ಅವರ ಜೊತೆಜೊತೆಗೇ ಇದ್ದ ನಮ್ಮ ಹೃಷಿಕೇಶ್ ದೇಸಾಯರು ಪಟ್ಟ ಪಡಿಪಾಟಲು ಇಲ್ಲಿದೆ.
ಅಂದು ರಾತ್ರಿಪಾಳಿ ಮುಗಿಸಿ ಮಲಗಿದ್ದೆ. ಯಾರೋ ನನ್ನನ್ನು ಹಕ್ಕೊಂಡು ಹೊಡೆದಿದ್ದಾರೋ ಎನ್ನುವಂತೆ ನಿದ್ದೆ ಬಂತು.
ನನ್ನ ಬಾಸ್ ಫೋನ್ ಬಂತು. ಧಡಕ್ಕನೇ ಎದ್ದೆ. ಆಗ ಚುಮುಚುಮು ೫ ಗಂಟೆ. ಇಷ್ಟೊತ್ತಿಗೆ ಫೋನ್ ಮಾಡ್ತಾರಲ್ಲೋ ‘......’, ಅಂದುಕೊಂಡೆ.
‘ನಾನೂ ಹತ್ತು ವರ್ಷದಿಂದ ನೋಡ್ತೇನಿ. ನಾನು ಕರೆದಾಗ ಒಂದು ದಿನ ಆದರೂ ಹಿಂಗ ಗಡಿಬಿಡಿ ಮಾಡೀರ‍್ಯಾ. ಆ ಸುಡುಗಾಡು ಕೆಲಸ, ಈ ಸುಡುಗಾಡು ಗಡಿಬಿಡಿ. ಹೊಗೊ ನಿಮ್ಮ ಮಂಜಾಳಾಗ', ಅಂತ ನನ್ನ ಹೆಂಡತಿ ಬೈದು ಮತ್ತೆ ಮಲಗಿದಳು. ರೂಢಿಯಂತೆ ಅದರಲ್ಲಿ ಸ್ಪೆಲಿಂಗ್ ಮಿಸ್ಟೇಕ್ ಕಂಡು ಹಿಡಿದರೆ ಹೊಡೆತ ತಿನ್ನುತೇನೆ ಎಂದು ಗೊತ್ತಾಗಿ ಸುಮ್ಮನಿದ್ದೆ.
ಮನೆಯಲ್ಲಿ ಬಿಎಸ್ಸೆನ್ನೆಲ್ ಸಿಗ್ನಲ್ ಬರೋದಿಲ್ಲವಾದ್ದರಿಂದ ರಸ್ತೆಗೆ ಬಂದೆ. ಹಲೋ ಎಂದೆ. ಅತ್ತಲಿನವರಿಗೆ ಕೇಳಲಿಲ್ಲ ಎಂದು ಖಾತ್ರಿಯಾದ ಮೇಲೆ ಜೋರಾಗಿ ಹಲೋ ಎಂದೆ.
‘ದೇಸಾರ, ಬೆಳ ಬೆಳಿಗ್ಗೆ ಬ್ರೇಕಿಂಗ್ ನ್ಯೂಸು ಏನರೆಪಾ? ಗೌರಮೆಂಟು ಬಿತ್ತೋ? ಕ್ರೈಮ್ ಸುದ್ದಿಯೋ, ಪ್ಲೇನ್ ಕ್ರ್ಯಾಷೋ, ಪಬ್ ಅಟ್ಯಾಕೋ, ಮಿನಿಸ್ಟರ್ ಸ್ಕ್ಯಾಂಡಲ್ಲೋ, ಏನಾತು', ಅಂತ ಬಂದರು ಪಕ್ಕದ ಮನೆಯ ಕಾಳೆ. ಅವರು ರಾಜ್ಯ ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷರು. ಅವರು ನನ್ನ ಬಗ್ಗೆ ಬಹಳ ತಪ್ಪು ತಿಳಿದುಕೊಂಡಿದ್ದಾರೆ.
ಪತ್ರಕರ್ತರ ಬಗ್ಗೆ ಜನ ಅನೇಕ ತಪ್ಪು ತಿಳುವಳಿಕೆ ಹೊಂದಿರುತ್ತಾರೆ. ಅದರಲ್ಲಿ ಪ್ರಮುಖವಾದವು ಇವು:
೧.ಪೇಪರಿನವರಿಗೆ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಎಲ್ಲಾ ಮಾಹಿತಿ ಇರುತ್ತದೆ.
೨.ರಾಜ್ಯ ಹಾಗು ರಾಷ್ಟ್ರ ದ ಎಲ್ಲಾ ನಾಯಕರು ಇವರೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಾರೆ.
೩.ಸರಕಾರದ ಎಲ್ಲಾ ಇಲಾಖೆಗಳಲ್ಲಿ ಪೇಪರಿನವರ ಪರಿಚಯದವರು ಇರುತ್ತಾರೆ. ಹೀಗಾಗಿ ಯಾವುದೇ ಇಲಾಖೆಯಲ್ಲಿ ಯಾರದಾದರೂ ಏನಾದರೂ ಕೆಲಸ ಇರಲಿ, ಪೇಪರಿನವರು ಹೋದರೆ ಲಂಚ ಇಲ್ಲದೇ ಕೆಲಸ ಆಗುತ್ತದೆ.
೪.ರಾಜಕಾರಣಿಗಳು, ಅಧಿಕಾರಿಗಳು, ಗುಂಡಾಗಳು ಹಾಗು ಇತರ ಕೆಟ್ಟವರೆಲ್ಲ ಪೇಪರಿನವರಿಗೆ ಹೆದರುತ್ತಾರೆ.
ಈ ರೀತಿಯ ನಂಬಿಕೆಗಳು ಜಾಸ್ತಿ ಇರುವದು ಪೇಪರನ್ನು ಬಿಟ್ಟೂ ಬಿಡದೇ ಓದುವ ಹಿರಿಯ ನಾಗರಿಕರಲ್ಲಿ.
ಅದು ಅಷ್ಟು ದೊಡ್ಡ ಸಮಸ್ಯೆ ಏನಲ್ಲ. ಇಂತಹ ಮೂಢನಂಬಿಕೆಗಳು ಕೆಲವು ಪತ್ರಕರ್ತರಲ್ಲೂ ಇರುತ್ತವೆ. ಅದು ನಿಜವಾದ ಸಮಸ್ಯೆ.
ಇರಲಿ. ಕಾಳೆ ಅವರು, ಅವರ ಸ್ನೇಹಿತರಾದ ಗೋರೆ ಅವರು, ದಿನಾ ಸಂಜೆ ನಮ್ಮ ಮನೆಗೆ ಬರುತ್ತಾರೆ. ನಾನು ಸುದ್ದಿ ಬರೆಯುತ್ತ ಕೂತಾಗ ಬಂದು ‘ಏನು ನಡದದ, ಏನು ಸುದ್ದಿ' ಅಂತ ಮಾತಿಗೆಳೆಯುತ್ತಾರೆ. ‘ನೀವು ಸುದ್ದಿ ಬರದು, ಅದು ಪ್ರಿಂಟ್ ಆಗಿ, ಪೇಪರ್ ಬಂದು, ಅದನ್ನು ನಾವು ಓದೋತನಕಾ ನಮಗ ಪೇಷನ್ಸ್ ಇಲ್ಲರೀ', ಎನ್ನುತ್ತಾರೆ. ‘ಇವತ್ತ ಎಲ್ಲಾ ತಿಳಕೋಬೇಕಾಗೇದ. ನಾಳೆ ತನಕ ಇರ‍್ತೇವೋ, ಇಲ್ಲೋ ಯಾವ ಬಲ್ಲ', ಅಂತ ತಮ್ಮ ಜೋಕಿಗೆ ತಾವೇ ನಗುತ್ತಾರೆ.
ಅಂತೂ ಅವತ್ತು ನಾನು ರಸ್ತೆಯಲ್ಲಿ ನಿಂತು ಜೋರು ಜೋರಾಗಿ ಮಾತಾಡಿದ್ದನ್ನು ಅವರು ಕೇಳಿದರು. ಯೌವ್ವನದಲ್ಲಿ ಅವರು ವಾಕಿಂಗ್ ಗೆ ಅಂತ ಬೇಗ ಏಳುತ್ತಿದ್ದರು. ನಂತರ ಅವರ ಮಡದಿ ತೀರಿಕೊಂಡು ಆರ್ಥ್ರೈಟಿಸ್ಸೇ ಅವರ ಜೀವನ ಸಂಗಾತಿಯಾಯಿತು. ಆ ನಂತರ ಅವರ ವಾಕಿಂಗ್ ನಿಂತು ಹೋಯಿತು. ಆದರೆ ಬೆಳಿಗ್ಗೆ ಬೇಗ ಏಳುವುದು, ಅಕ್ಕ ಪಕ್ಕದವರ ವ್ಯವಹಾರದಲ್ಲಿ ಮೂಗು ತೂರಿಸುವುದು ನಿಂತಿಲ್ಲ.
ಅವರು ಏನು ಸುದ್ದಿ ಅಂತ ಕೇಳಿದರು. ಏನೇನೂ ವಿಶೇಷ ಇಲ್ಲ ಸರ್, ಅಂತ ಹೇಳಿದರೆ ಅವರು ನಂಬಲಿಲ್ಲ. ‘ವಿಶೇಷ ಇಲ್ಲಂದರ ನಿಮ್ಮನ್ನು ಇಷ್ಟೊತ್ತಿಗೆ ರಸ್ತೆಗೆ ಕರೆಸುತ್ತಿದ್ದರ? ಸುಳ್ಳು ಹೇಳಬೇಡ್ರಿ', ಅಂತ ಹುಸಿ ನಗೆ ಬೀರಿದರು. “ಎಲ್ಲರೂ ಏನಾದರೂ ಒಂದು ಕಾರಣ ಇಟ್ಟುಕೊಂಡು ರೋಡಿಗೆ ಬರ‍್ತಾರ್ರೀ. ವಿನಾಕಾರಣ ರೋಡಿಗೆ ಬೀಳೋರು ಅಂದರೆ ನಾವೇ,' ಅಂತ ನಕ್ಕೆ. ಈ ಬಾರಿ ಅವರು ನಗಲಿಲ್ಲ.
ಅಂದ ಹಾಗೆ ನಮ್ಮ ಸರ್ ಫೋನ್ ಮಾಡಿದ್ದು ಬೇರೆ ವಿಷಯಕ್ಕೆ. “ಇವತ್ತು ಬೆಳಿಗ್ಗೆ ಬೆಳಿಗ್ಗೆ ಜಿಮ್ಮಿಂದ ಫೋನ್ ಬಂತು', ಅಂತ ಸರ್ ಹೇಳಿದರು.
ತಾನು ದಿನಾಲೂ ಜಿಮ್ ಹೋಗುತ್ತೇನೆಂದೂ, ಒಂದು ದಿನ ತಪ್ಪಿಸಿದ್ದಕ್ಕಾಗಿ ಅವರು ಫೋನ್ ಮಾಡಿದ್ದರೆಂದೂ ಅದರ ಅರ್ಥ ಅಲ್ಲ.
ದೆಹಲಿಯಲ್ಲಿ ನ್ಯೂಯಾಕ್ ಟೈಮ್ಸ್ ವರದಿಗಾರನಾಗಿರುವ ಅವರ ಸ್ನೇಹಿತ ಜಿಮ್ ಯಾರ್ಡಲಿ ಅವರು ಅವರಿಗೆ ಎರಡು ದಿನದ ಹಿಂದೆ ಫೋನ್ ಮಾಡಿದ್ದು ಅವರಿಗೆ ಇವತ್ತು ಬೆಳಿಗ್ಗೆ ನೆನಪಾಗಿ ಅವರು ಫೋನ್ ಮಾಡಿದ್ದರು.
‘ಜಿಮ್ ಅವರು ಬಳ್ಳಾರಿಗೆ ಹೋಗಬೇಕಂತೆ. ಅವರ ಜತೆ ಹೋಗಲಿಕ್ಕೆ ಜನ ಬೇಕಿತ್ತು. ನೀನು ಹೋಗು. ಅವರಿಗೆ ಅನುಕೂಲ ಆಗುತ್ತದೆ' ನಿನಗೂ ವಿಶೇಷ ಅನುಭವ ಆಗುತ್ತದೆ ' ಎಂದರು. ಅಂಥವರ ‘ಅನುಕೂಲ' ಎಂದರೆ ಏನು ಅಂತ ನನಗೆ ಗೊತ್ತು.
೧.ಅವರಿಗಾಗಿ ಟ್ಯಾಕ್ಸಿ, ಹೊಟೆಲ್ ಎಲ್ಲ ಬುಕ್ ಮಾಡಬೇಕು.
೨.ವಿಮಾನ ನಿಲ್ದಾಣದಲ್ಲಿ ಜೈಲುವಾಸಿಗಳಂತೆ ಪಾಟಿ ಹಿಡಿದು ನಿಂತು ಆ ಬಿಳಿಯರನ್ನು ಗುರುತು ಹಿಡಿದು ಕರೆದುಕೊಂಡು ಬರಬೇಕು
೩.ಅವರನ್ನೂ, ಅವರ ಕ್ಯಾಮೆರಾಮೆನ್ ಗಳನ್ನು (ವುಮೆನ್ ಆಗಿದ್ದರೆ ಬೇರೆ ವಿಷಯ) ಹೋಟೆಲಿನಲ್ಲಿ ಇಳಿಸಿ, ನೀರು ಬೇಕೆ, ಬೀರು ಬೇಕೆ ಅಂತ ಕೇಳಿ ಕೊಡಿಸಬೇಕು.
೪.ಅವರ ಸ್ವೀಟಿನ ಸಂಡಾಸಿನ ಒಳಗೆ ಹೋಗಿ, ಅದು ವಾಸನೆ ಬರುವುದಿಲ್ಲ ವೆಂದು ಖಾತ್ರಿ ಮಾಡಿಕೊಂಡು, ಬಾಸ್ ಗೆ ಫೋನ್ ಮಾಡಬೇಕು.
ಇನ್ನು ನನ್ನ ಅನುಭವ ಎಂದರೆ ಏನು ಅಂತಲೂ ನನಗೆ ಗೊತ್ತು.
೧.ಅವರ ಜತೆ ಗಾಡಿಯಲ್ಲಿ ಹೋಗಿ, ರಸ್ತೆಯಲ್ಲಿನ ಎತ್ತು, ಆಕಳು, ನಾಯಿಗಳ ಬಗ್ಗೆ, ಟ್ರಾಫಿಕ್ ಬಗ್ಗೆ, ಬ್ರಿಟೀಷರ ಕಾಲದಿಂದ ಇರುವ ಕಾಲರಾ ಮಲೇರಿಯಾದ ಬಗ್ಗೆ ಅವರು ಮಾಡುವ ಅಸಹ್ಯ ಕಮೆಂಟುಗಳನ್ನು ಕೇಳುವುದು, ಅದಕ್ಕೆ ಉತ್ತರವಾಗಿ ನಮ್ಮ ಮುಂದೆ ನಡುರಸ್ತೆಯಲ್ಲಿ ನಿಂತ ಎಮ್ಮೆಯಂತೆ ಗೋಣು ಹಾಕುವುದು.
೨.`ಈ ದೇಶದಲ್ಲಿ ಅರ್ಧ ಜನರಿಗೆ ಟೈಂ ಇಲ್ಲ. ಇನ್ನರ್ಧ ಜನರಿಗೆ ಅದೊಂದು ಬಿಟ್ಟು ಬೇರೆ ಏನೂ ಇಲ್ಲ. ಇಂಥಲ್ಲಿ ಪ್ರಜಾಪ್ರಭುತ್ವ ಹೇಗೆ ನಡೀತಾ ಇದೆ? ಐ ವಂಡರ್ 'ಅಂತ ಅವರು ಹೇಳಿದಾಗ. ‘ಯೆಸ್, ಐ ಟೂ ವಂಡರ್ 'ಅಂತ ದನಿಗೂಡಿಸುವುದು.
೩.ನೀವೆಲ್ಲ ಅರೇಂಜ್ಡ್ ಮ್ಯಾರೇಜ್ ಮಾಡಿಕೊಳ್ಳುತ್ತೀರಂತೆ ನಿಜವೇ? ನೀವು ಹೇಗೆ ಮದುವೆಯಾದದ್ದು? ಅಂತ ನನ್ನನ್ನು ಕೇಳಿದ ಆರು ಸಾವಿರದ ಎಳು ನೂರಾ ಎಂಬತ್ತೊಂಬತ್ತನೇ ಬಿಳಿಯನಿಗೆ ನಾನು ಬೇರೆ ಎಲ್ಲರಿಗೆ ಕೊಟ್ಟಂತೆ ಸ್ಮೈಲ್ ಕೊಟ್ಟು ಉತ್ತರ ಕೊಡಬೇಕು. ಅದರಿಂದ ಅವರ ಸಮಾಧಾನವಾಗುವುದಿಲ್ಲ. ಆದರೂ ಹೇಳಬೇಕು.
೪.‘ನಿಮ್ಮ ದೇಶದಲ್ಲಿ ಸ್ತ್ರೀ ಸ್ವಾತಂತ್ರ್ಯ ಇಲ್ಲ ಎನ್ನುತ್ತಾರಲ್ಲಾ? ’ ಅಂತ ಅವರು ಕೇಳುತ್ತಾರೆ. ಹೆಣ್ಣು ಮಕ್ಕಳು ಇದ್ದರೆ ಈ ಪ್ರಶ್ನೆ ಕೇಳುವ ಸಾಧ್ಯತೆ ಜಾಸ್ತಿ. ಅಂಥವರಿಗೆ ನಾನು ಏನನ್ನೂ ಹೇಳುವುದಿಲ್ಲ. ನನ್ನ ಮನೆಗೆ ಊಟಕ್ಕೆ ಕರೆದುಕೊಂಡು ಹೋಗುತ್ತೇನೆ. ಒಂದೆರಡು ತಾಸು ನನ್ನ ಮನೆಯಲ್ಲಿ ಇದ್ದವರಿಗೆ ಈ ದೇಶದಲ್ಲಿ ಯಾರಿಗೆ ಸ್ವಾತಂತ್ರ್ಯ ಇದೆ, ಯಾರಿಗೆ ಇಲ್ಲ ಎನ್ನುವ ವಿಷಯ ಸ್ಪಷ್ಟವಾಗುತ್ತದೆ.
೫.ಸಂದರ್ಶನಗಳಲ್ಲಿ ಅವರು ಕೇಳುವ ಯಾರಿಗೂ ತಿಳಿಯದ ವಿಚಿತ್ರ ಪ್ರಶ್ನೆಗಳನ್ನು ಎಲ್ಲರಿಗೆ ತಿಳಿಯುವಂತೆ ಭಾಷಾಂತರಿಸಿ, ಭಾವಾಂತರಿಸಿ, ಕೇಳಿ, ತಿಳಿದು, ಅವರ ಸುದ್ದಿಗೆ ಅದು ಹೊಂದಿಕೊಳ್ಳುವಂತೆ ಅವರಿಗೆ ತಿಳಿ ಹೇಳುವುದು,
ಇಷ್ಟೆಲ್ಲ ಮಾಡಿದ ಮೇಲೆ ಅವರಿಂದ ನಮಗೆ ಸಿಗುವುದೇನು? ಅವರು ವಾಪಸ್ ಹೋಗುವಾಗ ವಿಮಾನ ನಿಲ್ದಾಣದಲ್ಲಿ ಒಂದು ಗಡಿಬಿಡಿಯ ಅಪ್ಪುಗೆ. (ಅದನ್ನು ಕೊಡುವವರು ವುಮೆನ್ ಆದರೆ ಪರವಾಗಿಲ್ಲ. ಆದರೆ ಬಹಳ ಸಾರಿ ಹಾಗಾಗುವುದಿಲ್ಲ!)
ಎರಡು ದಿನ ರಜೆ ತೆಗೆದುಕೊಳ್ಳ ಬೇಕೆಂದು ಕೊಂಡಿದ್ದ ನನಗೆ ಬೇಜಾರಾಯಿತು.
ಈ ದೊಡ್ಡವರಿಗೆಲ್ಲಾ ಬಳ್ಳಾರಿಗೆ ಹೋಗುವುದು ಯಾಕೆ ಬೇಕಿತ್ತು. ಅಲ್ಲಾ, ಸುಶ್ಮಾ ಸ್ವರಾಜ್ ಗೆ ವರಮಹಾಲಕ್ಷ್ಮಿ ಪೂಜೆಗೆ ಬಳ್ಳಾರಿಗೆ ಹೋಗಬೇಕು. ಕಾಂಗ್ರೆಸ್ ನವರಿಗೆ ತಮ್ಮ ಸ್ಥೂಲಕಾಯ ಪಕ್ಷದ ಕೊಲೆಸ್ಟರಾಲ್ ಕಡಿಮೆ ಮಾಡಲು ಬಳ್ಳಾರಿಗೆ ಹೋಗಬೇಕು. ಅವರಿಗಿಂತ ಜೋರಾಗಿ ಕೂಗಿ ಅವರ ದನಿಯೇ ಕೇಳದಂತೆ ಮಾಡುವಂಥ ರ‍್ಯಾಲಿ ಮಾಡಲು ಬಿಜೆಪಿ ಯವರಿಗೆ ಬಳ್ಳಾರಿಗೆ ಹೋಗಬೇಕು.
ಆದರೆ ಈ ಜಿಮ್ ಯಾರ್ಡಲಿಗೆ ಯಾಕೆ ಹೋಗಬೇಕು?
“ಚೀನಾದಲ್ಲಿ ಜನ ಹಾವು ತಿಂದು ಮುಗಿಸಿದ್ದರ ಪರಿಣಾಮವಾಗಿ ಬೆಕ್ಕುಗಳಷ್ಟು ದೊಡ್ಡದಾಗಿ ಬೆಳೆದು ನಿಂತ ಇಲಿಗಳು" “ಯಂತ್ರಗಳ ಬಿಡಿಭಾಗಗಳನ್ನು ತಯಾರು ಮಾಡಿ ಸಾಕಾದ ಕಾರ್ಮಿಕರಿಂದ ನಕಲಿ ಮನುಷ್ಯರನ್ನು ತಯಾರು ಮಾಡಲು ಪರವಾನಗಿ ಆಗ್ರಹಿಸಿ ಮುಷ್ಕರ " ಇತ್ಯಾದಿ ಗಂಭೀರ ವರದಿಗಾರಿಕೆ ಮಾಡುವವರಿಗೆ ಗಣಿ-ಮನಿ ವಿಷಯ ಯಾಕೆ?
ಅವನೀಗ ಸಿರ್ಸಿ-ಸಿದ್ದಾಪುರ ನಡುವಿನ ಕಾಡಿನಲ್ಲಿರುವ ಸಿದ್ಧಿಯೊಬ್ಬ ಬರಾಕ್ ಒಬಾಮಾ ನಂತೆ ಕಾಣುವುದಕ್ಕೂ, ಭಾರತ ಮತ್ತು ಅಮೇರಿಕದ ನಡುವಿನ ಅಣು ಒಪ್ಪಂದಕ್ಕೂ ಇರುವ ಸಂಬಂಧ ಎನ್ನುವಂತಹ ಗಂಭೀರ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಾ ದೆಹಲಿಯಲ್ಲಿ ಅರಾಮಾಗಿ ಇದ್ದಾನೆ ಎಂದು ಕೇಳಿದ್ದೆ.
ಅದನ್ನೆಲ್ಲ ಬಿಟ್ಟು ಈ ಹೈಲೆವಲ್ ಮನುಷ್ಯನಿಗೆ ಬಳ್ಳಾರಿ ಯಾಕೆ ನೆನಪಾಯಿತು? ಪುಲಿಟ್ಜರ್ ಪ್ರಶಸ್ತಿ ಬೇಕಾ ಎಂದರೆ ನನಗೊಂದು ನಮ್ಮಪ್ಪನಿಗೊಂದು ಎಂದು ಎರಡೆರಡು ಇಸಗೊಂಡಿರುವ ಈ ಪತ್ರಕರ್ತನಿಗೇಕೆ ಈ ಮಣ್ಣು ಧೂಳಿನ ಸಹವಾಸ ಎಂದು ಬೈದುಕೊಂಡೆ.
ಆದರೆ ಹಿರಿಯ ಪತ್ರಕರ್ತರು ಹೇಳಿದ ಕೆಲಸವನ್ನು ನಮ್ಮಂತಹ ಹುಲು ಮಾನವರು ಇಲ್ಲ ಎನ್ನುವುದುಂಟೆ?
ಹೀಗಾಗಿ ‘ಹೂಂ’ ಎಂದೆ. ಅವರು ಹತ್ತು ನಿಮಿಷ ಮಾತಾಡುತ್ತಾ ಹೋದರು. ನಾನು ಹೂಂ ಎನ್ನುತ್ತಾ ಇದ್ದೆ. ಹಾಗಾದರೆ ಈಗ ವಿಮಾನ ನಿಲ್ದಾಣಕ್ಕೆ ಹೊರಡಿ ಇನ್ನೇನು ಹತ್ತು ನಿಮಿಷದಲ್ಲಿ ಅವರ ವಿಮಾನ ಬಂದು ಬಿಡುತ್ತೆ ಎಂದರು.
“ಯಾರ್ಡಲಿ ಬರ‍್ತಾನಂತ ಬರಲಿ. ಬಳ್ಳಾರಿ ಮೆಣಸಿನಕಾಯಿ ಸಾಂಬಾರು ಕುಡಿಸಿಬಿಡ್ತೇನೆ. ಅವರ ಅಪ್ಪ ಅಮ್ಮ ನೆನಪಾಗಿರಬೇಕು. ಇನ್ನೊಂದು ಸಲ ಬಳ್ಳಾರಿ ಅಂದಿರಬಾರದು ‘......’ ಅಂತ ಒಂದು ಸಾರಿ ಅಂದುಕೊಂಡೆ.
ಇನ್ನೊಂದು ತಾಸಿಗೆ ನಾನು ವಿಮಾನ ನಿಲ್ದಾಣದಲ್ಲಿ ನಿಂತಿದ್ದೆ. ವಿಮಾನ ಎರಡು ಗಂಟೆ ತಡವಾಗಿ ಬಂತು. ಬಂದವರು ಬಂದ ತಕ್ಷಣ,ಇದೆಂಥ ವ್ಯವಸ್ಥೆ. ಇದನ್ನೆಲ್ಲ ನೀವು ಹೇಗೆ ಸಹಿಸಿಕೊಳ್ಳುತ್ತೀರಿ? ಅಂತ ಅಂದರು. ನಾವು ಯಾರ‍್ಯಾರನ್ನೋ ಏನೇನನ್ನೋ ಸಹಿಸಿಕೊಳ್ಳುತ್ತೇವೆ ಸ್ವಾಮಿ. ಆಫ್ಟರಾಲ್ ಒಂದು ವಿಮಾನ ತಡವಾಗುವುದು ಏನು ಮಹಾ ಅಂತ ಅಂದೆ. ಅವರು ಅರ್ಧ ಮುಗುಳುನಕ್ಕರು. ನಾನು ಜೋರಾಗಿ ನಕ್ಕೆ.
ಅವರು ವಿಮಾನದಿಂದ ತಮ್ಮ ಸಾಮಾನು ಇಳಿಸುವುದು, ಅದನ್ನು ಎಣಿಸುವುದು, ಮಿನೆರೆಲ್ ವಾಟರ್ ಬಾಟಲ್ ತೊಗೊಂಡು ತಮ್ಮ ಟ್ಯಾಕ್ಸಿಯಲ್ಲಿ ತುಂಬಿಸುವುದು, ಇಪ್ಪತ್ತು ಸಾರಿ ಗೂಗಲ್ ಮ್ಯಾಪ್ ತೆಗೆದು ಬೆಂಗಳೂರು -ಬಳ್ಳಾರಿ ದೂರ ನೋಡುವುದು, ಲೋನ್ಲಿ ಪ್ಲಾನೆಟ್ ಪುಸ್ತಕ ತೆಗದು ತಾಳೆ ನೋಡುವುದು ಮಾಡಿದರು.
ನನಗೆ ಮೂವತ್ತು ಪ್ರಶ್ನೆಗಳನ್ನು ಹತ್ತು ಸಾರಿ ಕೇಳಿದರು. ಅವುಗಳಲ್ಲಿ ಕೆಲವು ಇವು:
ಬಳ್ಳಾರಿಯಲ್ಲಿ ಬಿಸಿಲು ಬಹಳವೇ? ಅಲ್ಲಿ ಒಳ್ಳೆ ಹೋಟೆಲ್ ಇದೆಯಾ? ಖಾರ ಇಲ್ಲದ ಊಟ ಸಿಗತ್ತಾ? ಅಲ್ಲಿಯ ವಿಮಾನ ನಿಲ್ದಾಣಕ್ಕೆ ದಿನಕ್ಕೆ ಒಂದೇ ಬಾರಿ ವಿಮಾನ ಇಳಿಯುತ್ತದಂತೆ ಹೌದಾ?.
ಅವರ ಜತೆಯಲ್ಲಿ ಬಂದವರೊಬ್ಬರು ಹೇಳಿದರು.
ನಾನು ಹಿಂದಿ ಕಲಿತಿದ್ದೇನೆ. ನಮಸ್ತೆ ಎಂದರೆ ಗುಡ್ ಮಾರ್ನಿಂಗ್, ಮಿರ್ಚಿ ಕಮ್ ಎಂದರೆ ಖಾರ ಕಮ್ಮಿ ಅಂತ ಅರ್ಥ ಅಲ್ಲವೇ ಅಂದರು.
ಹೌದು ಎಂದು ಗೋಣಾಡಿಸಿದೆ.
ಮತ್ತೇನು ಚೀನಿ ಕಮ್ ಎಂದು ಹೇಳಿದ್ದರೆ ಅಮಿತಾಭ ಬಚ್ಚನ್ ಆಗುತ್ತೇನೆ ಎಂದು ಕೊಂಡಿದ್ದೆಯೇನು ಅಂತ ಮನಸ್ಸಿನಲ್ಲಿಯೇ ಅಂದುಕೊಂಡೆ.
ಬೆಂಗಳೂರಿನಿಂದ ನಮ್ಮ ಏಸಿ ಟ್ಯಾಕ್ಸಿ ಹೊರಟಿತು. ತುಮಕೂರು ದಾಟಿದ ತಕ್ಷಣ ಆ ಗುಂಪಿನಲ್ಲೊಬ್ಬರು ಕೇಳಿದರು. ಇನ್ನೂ ಎಷ್ಟು ದೂರ? ಆ ಪ್ರಶ್ನೆ ಕೇಳಲು ಇದು ಸರಿಯಾದ ಸಮಯವಲ್ಲ. ಈಗಷ್ಟೇ ಶುರು ಮಾಡಿದ್ದೇವೆ ಎಂದೆ. ಅವರು ಏನಾದರೂ ಮಾಡಿಕೊಳ್ಳಲಿ ಎಂದು ಸೀಟಿನ ಮೇಲಿನ ದಿಂಬಿಗೆ ತಲೆ ಒರಗಿಸಿ ಮಲಗಿ ಬಿಟ್ಟೆ.
ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
ಬೆಂಗಳೂರಿನಿಂದ ಬೆಳಿಗ್ಗೆ ಹತ್ತು ಗಂಟೆಗೆ ಟ್ಯಾಕ್ಸಿಯಲ್ಲಿ ಹೊರಟ ನಾವು ಆಕಾಶ ಮಾರ್ಗವಾಗಿ ಅನೇಕ ಖಂಡಗಳನ್ನು ದಾಟಿ ಅನೇಕ ವರ್ಷಗಳ ನಂತರ ಬಳ್ಳಾರಿ ತಲುಪಿದೆವು.
ಊರಿಗೆ ಬರುತ್ತಲೇ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳೀಯ ಶಾಸಕರಾದ ಸೋಮಶೇಖರ ರೆಡ್ಡಿ ಅವರು ಒಂದು ಸರ್ಕಲ್ ನಲ್ಲಿ ಪೂಜೆ ಮಾಡುತ್ತಿದ್ದರು. ನಾಲ್ಕು ರಸ್ತೆ ಕೂಡುವಲ್ಲಿ ಮೂರು ಕಡೆ ಮಹಾಕಾಳನ ಮೂರ್ತಿ ಸ್ಥಾಪಿಸಿ ಒಂದು ಕಡೆ ತಾವು ಕೂತಿದ್ದರು.
ಸಚಿವರನ್ನು ತೀರಾ ರಸ್ತೆಯಲ್ಲಿ ಏನು ಕೂಡಿಸುವುದು ಅಂತ ಅಧಿಕಾರಿಗಳು ರಾತ್ರೋರಾತ್ರಿ ಅಲ್ಲಿ ಒಂದು ಗುಡಿ ಕಟ್ಟಿಸಿದ್ದರು. ‘ನಿನ್ನೆ ರಾತ್ರಿವರೆಗೂ ಇದೇ ಜಾಗದಲ್ಲಿ ಒಂದು ಗಡಿಯಾರ ಗೋಪುರ ಇತ್ತಲ್ರೀ, ಅಂತ ದೂರ ನಿಂತ ಕೆಲವು ಕುಹಕಿಗಳು ಮಾತಾಡುತ್ತಿದ್ದರು.
ಗುಡಿಯಲ್ಲಿ ಪೋಲಿಸರು ಕಮ್ಮಿ, ಪುರೋಹಿತರು ಜಾಸ್ತಿ ಇದ್ದರು. ಅವರೆಲ್ಲ ಜೋರು ದನಿಯಲ್ಲಿ ನಾನು ಯಾವತ್ತೂ ಕೇಳದ ಒಂದು ಸಹಸ್ರನಾಮ ಪಠಿಸುತ್ತಿದ್ದರು. ಗರ್ಭಗುಡಿಯಲ್ಲಿ ನೋಡಿದರೆ ಅಲ್ಲಿ ದೇವರ ಮೂರ್ತಿ ಇಲ್ಲ. ಬದಲಿಗೆ ಒಂದು ಅಚ್ಚ ಹಳದೀ ಬಣ್ಣದ ಜೆಸಿಬಿ ಇದೆ! ಜೆಸಿಬಿ ಸಹಸ್ರನಾಮವನ್ನು ನಾನು ಇಲ್ಲಿಯವರೆಗೂ ನಾನು ಕೇಳದೇ ಇರುವುದು ನನ್ನ ಅಜ್ಞಾನ ಅಂತ ಅನ್ನಿಸಿತು. ಅವರವರ ಭಾವಕ್ಕೆ, ಅವರವರ ಭಕುತಿಗೆ ಅನ್ನುವ ದಾಸರ ಹಾಡು ಗುನುಗುನಿಸುತ್ತಾ ನಾನು ಹೊರ ಬಂದೆ.
ಇದನ್ನು ಮುಗಿಸಿ ಒಂದು ಮುಖ್ಯವಾದ ಕಾರ್ಯಕ್ರಮಕ್ಕೆ ಹೋಗಬೇಕು ಅಂತ ಶಾಸಕರು ಅಂದರು. ಬಳ್ಳಾರಿಯಲ್ಲಿ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಆ ನಲ್ಲಿ, ಪೈಪ್ ಲೈನುಗಳನ್ನು ಯಾಕೆ ವೇಸ್ಟ್ ಮಾಡಬೇಕು ಅಂತ ಅದರಲ್ಲಿ ಹಾಲು ಸಪ್ಲೈ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಜನರಿಗೆ ಹಾಲೇ ಕೊಡುವಾಗ ನೀರು ಯಾರಿಗೆ ಬೇಕ್ರೀ ಅಂದರು. ಅಷ್ಟಾಗಿಯೂ ಅದರಲ್ಲೇ ನಗರಪಾಲಿಕೆಯವರು ನೀರು ಬಿಟ್ಟರೆ ಒಳ್ಳೆಯದೇ ಆಯಿತು. ಕೆಎಂಎಫ್ ನವರ ಹಾಲೂ, ನೀರೂ ಒಂದೇ ಅಲ್ಲವೇ. ಬಣ್ಣ ಮಾತ್ರ ಬೇರೆ. ಬಣ್ಣದಲ್ಲೇನಿದೆ ಅಂದರು. ಕೊನೆಗೂ ಕೆಎಮ್ಮೆಫ್ಫಿಗೆ ನಿಜ ಹೇಳುವ ಅಧ್ಯಕ್ಷರು ಸಿಕ್ಕರು ಅಂದುಕೊಂಡೆ.
ಅಲ್ಲೇ ಪಕ್ಕದ ಗಾರ್ಡನ್ ನಲ್ಲಿ ಕರುಣಾಕರ ರೆಡ್ಡಿ ಅವರು ಕೆಂಪು ಬಣ್ಣದ ಮಡಿ, ಧೋತಿ ಉಟ್ಟುಕೊಂಡು ಸಣ್ಣ ಮಕ್ಕಳಿಗೆ
ಮಹಾಭಾರತ-ರಾಮಾಯಣದ ಕತೆ ಹೇಳುತ್ತಿದ್ದರು. ಡಯಾಲಾಗು, ಸ್ವಗತ, ಆಂಗಿಕ ಅಭಿನಯ ಎಲ್ಲ ಸೇರಿ ಬಹಳ ಇಂಟರೆಸ್ಟಿಂಗ್ ಆಗಿತ್ತು. ‘ಕೃಷ್ಣ ಕಂಸನ ನೂರು ತಪ್ಪು ಕ್ಷಮಿಸುತ್ತಾನೆ. ನೂರು ಪಾಯಿಂಟ್ ಒಂದನೇ ತಪ್ಪು ಮಾಡುತ್ತಿದ್ದಂತೆ ಕಂಸನ ಹತ್ತೂ ತಲೆಗಳನ್ನೂ ಕಡಿದು ಬಿಡುತ್ತಾನೆ' ಅಂದರು. ಅರೆ, ಇದು ಶಿಶುಪಾಲ ಹಾಗೂ ರಾವಣನ ಕತೆ ಅಲ್ಲವೇ ಅನ್ನಿಸಿತು. ಸುಮ್ಮನಾದೆ.
ಕತೆ ಮುಂದುವರೆಸಿದ ಅವರು, ರಾಮ ಜೂಜಾಟದಲ್ಲಿ ಹೆಂಡತಿಯನ್ನು ಕಳೆದುಕೊಂಡ, ತನ್ನೆಲ್ಲ ಆಸ್ತಿಯನ್ನು ದುರ್ಯೋಧನನ ಹೆಸರಿಗೆ ಬರೆದು ಶ್ರೀಲಂಕಾಗೆ ಹೋಗಿ ಸೆಟಲ್ ಆದ ಅಂದರು.
ನನಗೆ ಎಲ್ಲೋ ಏನೋ ತಪ್ಪುತ್ತಿದೆ ಎನ್ನುವ ಸಂದೇಹ ಬಂದರೂ ಮುಂದೇನು ಹೇಳುತ್ತಾರೋ ಎನ್ನುವ ಕುತೂಹಲದಿಂದ ಸುಮ್ಮನೇ ಇದ್ದೆ.
ಲಕ್ಷ್ಮಣನ ತಮ್ಮನಾದ ದುಶ್ಶಾಸನ ಸೀತೆಯನ್ನು ಕಿಡ್ಯ್ನಾಪ್ ಮಾಡಿ ಗೋಕರ್ಣದ ಸಮುದ್ರ ತೀರದಲ್ಲಿ ಇಡುತ್ತಾನೆ. ಅಲ್ಲಿ ಘಟೊತ್ಕಚ ಬಂದು ಅವಳಿಗೆ ‘ನೀನಿಲ್ಲೇ ಇರಬೇಕಂತೆ, ಸಾಹೇಬರು ಆರಾಮಾಗಿದ್ದಾರಂತೆ ಅಂತ ಮೆಸೇಜು ಕೊಡುತ್ತಾನೆ' ಅಂದರು.
ಕುಂಭಕರ್ಣ ಶಕುನಿಗೆ ಭಗವದ್ಗೀತೆಯ ಪಾಠ ಹೇಳುತ್ತಾನೆ, ನೀನು ಬೇಕಾದರೆ ಮನೆಗೆ ಹೋಗಿ ಕೃಷ್ಣನಿಗೂ, ಅರ್ಜುನನಿಗೂ ಸ್ವಲ್ಪ ಸ್ವಲ್ಪ ಹೇಳಿಕೊಡು ಅಂತ ಹೇಳಿದ ಅಂದರು.
ರಾಮ ತನ್ನ ನೂರಾ ಒಂದು ತಮ್ಮಂದಿರೊಂದಿಗೆ ಬಂದು ಕುರುಕ್ಷೇತ್ರ ಯುದ್ಧದಲ್ಲಿ ಲಕ್ಷ್ಮಣನ ಸೇನೆಯನ್ನು ನಿರ್ನಾಮ ಮಾಡುತ್ತಾನೆ.
ಆ ನಂತರ ದುರ್ಯೋಧನನಿಗೆ ಪಟ್ಟ ಕಟ್ಟುತ್ತಾನೆ.
ಹನುಮಂತನ ಮಾತು ಕೇಳಿ ಕೃಷ್ಣ ತನ್ನ ಹೆಂಡತಿಯನ್ನು ಭೀಷ್ಮನ ಆಶ್ರಮಕ್ಕೆ ಅಟ್ಟುತ್ತಾನೆ. ಅವಳು ತನ್ನಂತೆಯೇ ನಿರ್ಗತಿಕಳಾದ ಮಂಡೊದರಿಯ ಜತೆ ಜಿಲ್ಲಾ ಪಂಚಾಯತಿಯವರು ನಡೆಸುವ ಹೊಲಿಗೆ ಕ್ಲಾಸಿಗೆ ಹೋಗುತ್ತಾಳೆ ಅಂದರು.
ಕೊನೆಗೆ ಯಾದವೀ ಕಲಹದಲ್ಲಿ ರಾಮನ ಸಂಬಂಧಿಕರೆಲ್ಲ ನಾಶವಾಗುತ್ತಾರೆ. ಕರುಣಾನಿಧಿ ಅವರ ಸಲಹೆಯಂತೆ ರಾಮ ಇಂಜಿನಿಯರಿಂಗ್ ಕಾಲೇಜು ಸೇರಿಕೊಳ್ಳುತ್ತಾನೆ, ಅಂತ ಮುಗಿಸಿದರು.
ಸರ್, ಇದು ಸ್ವಲ್ಪ ತಪ್ಪಾಗಲಿಲ್ಲವೇ ಅಂತ ನಾನು ಅವರನ್ನು ಕೇಳಿದೆ. ಆದರೆ ಅವರು ‘ಛೆ! ಎಲ್ಲಾದರು ಉಂಟೆ. ನಾನು ಹೇಳಿದ್ದೇ ಸರಿ' ಅಂತ ವಾದಿಸಿದರು. ‘ಹೌದು, ಹೌದು. ಜೀ ಹುಜೂರ್' ಎಂದು ಅವರ ಅವರ ಸುತ್ತ ನೆರೆದಿದ್ದ ಆಸ್ಥಾನ ಪಂಡಿತರು ಹರ್ಷೋದ್ಘಾರ ಮಾಡಿದರು. ‘ನೀವು ಹೇಳಿದ್ದು ಸರಿ ಇದೆ ಸರ್, ಆದರೆ, ಪಾತ್ರಗಳು ಅದಲಿ ಬದಲಿಯಾಗಿ ಕತೆ ಸ್ವಲ್ಪ ಮಿಕ್ಸ್ ಅಪ್ ಆಗಲಿಲ್ಲವೇ' ಅಂತ ಅಂದೆ.
‘ಓ ಅದಾ, ನೋಡಿ ನಾವು ಯಾವಾಗ ನಮಗೆ ಆಗಲಾರದವರೊಂದಿಗೆ ಅಲಾಯನ್ಸ್ ಮಾಡಿಕೊಂಡೆವೋ ಆಗಿನಿಂದ ಈ ಥರ ಮಿಕ್ಸ್ ಅಪ್ ಆಗ್ತಾ ಇದೆ. ಸ್ವಲ್ಪ ಅಡ್ ಜಸ್ಟ್ ಮಾಡಿಕೋಬೇಕು' ಅಂತ ಅಂದರು. ‘ನಾವು ಅಡ್ ಜಸ್ಟ್ ಮಾಡಿಕೊಳ್ಳಬಹುದು ಸಾರ್ ಆದರೆ ಈ ಕತೆಗಳನ್ನು ಮೊದಲ ಬಾರಿ ಕೇಳುತ್ತಿರುವ ಮಕ್ಕಳಿಗೆ ತಪ್ಪು ಕಲ್ಪನೆ ಮೂಡಬಹುದಲ್ಲವೇ' ಅಂದೆ. ‘ಹಾಗೇನಿಲ್ಲ. ಇದೇ ಸರಿ ಅಂತ ಅವರಿಗೆ ತಿಳಿಹೇಳಬೇಕು. ನಂಬಲಿಲ್ಲ ಅಂದರೆ ಮುಂದಿನ ವರ್ಷದ ಪಠ್ಯಪುಸ್ತಕದಲ್ಲಿ ಈ ಕತೆಗಳನ್ನು ಸೇರಿಸಬೇಕು' ಅಂದರು. ‘ಅದಕ್ಕೇ ನಾನು ಮುಂದಿನ ಸಂಪುಟ ವಿಸ್ತರಣೆಯಲ್ಲಿ ಶಿಕ್ಷಣ ಸಚಿವನಾಗಬೇಕು ಅಂತ ಇದ್ದೇನೆ' ಅಂದರು. ಆ ವಿಸ್ತರಣೆ ಇನ್ನಷ್ಟು ಮುಂದಕ್ಕೆ ಹೋಗಲಿ ಅಂತ ನಾನು ಆ ದಯಾಮಯನಾದ ಭಗವಂತನಲ್ಲಿ ಬೇಡಿಕೊಂಡೆ.
ನಂತರ ರೇಲ್ವೇ ಸ್ಟೇಷನ್ ಪಕ್ಕದ ಹೊಟೆಲ್ ಒಂದರಲ್ಲಿ ಇಳಿದೆವು. ಇದರ ಮಾಲಿಕರು ಯಾರು ಅಂತ ಕುತೂಹಲಕ್ಕೆ ಕೇಳಿದೆ. ‘ಬಳ್ಳಾರಿಯಲ್ಲಿ ಆ ಪ್ರಶ್ನೆಯ ಮೇಲೆ ನಿರ್ಬಂಧ ಇದೆ ಸರ್ ಅಂತ ರಿಸೆಪ್ಷನಿಷ್ಟ್ ಹೇಳಿದಳು. ಯಾಕೆ? ಯಾಕೆಂದರೆ, ನೀವು ಎಲ್ಲಿಯೇ ನಿಂತು ಯಾವುದರ ಬಗ್ಗೆ ಈ ಪ್ರಶ್ನೆ ಕೇಳಿದರೂ ನಿಮಗೆ ಸಿಗುವ ಉತ್ತರ ಒಂದೇ. ಆಗ ನಿಮಗೆ ಬೋರಾಗುವುದಿಲ್ಲವೇ? ಅದಕ್ಕೇ, ಅಂದಳು. ಸುಣ್ಣದ ಕಲ್ಲಿನ ಮೇಲೆ ನೀರು ಹಾಕಿದಾಗ ಅದು ಸಾವಕಾಶವಾಗಿ ಬಿರಿದಂತೆ ಸಣ್ಣನೇ ನಕ್ಕಳು. ನನಗೆ ಅವಳ ಉತ್ತರ, ನಗು ಎರಡೂ ಅರ್ಥವಾಗಲಿಲ್ಲ. ಆದರೆ ನಾನೂ ನಕ್ಕೆ.
ಬರುವಾಗ ನನ್ನ ಸ್ನೇಹಿತರೊಬ್ಬರು ಜನಾರ್ಧನ ರೆಡ್ಡಿ ಅವರ ಪಿಎ ಅವರ ಫೋನ್ ನಂಬರ್ ಕೊಟ್ಟಿದ್ದರು. ಅದಕ್ಕೆ ಫೋನ್ ಮಾಡಿದರೆ ಪಿಎ ಸಾಹೇಬರು ವಾಕಿಂಗ್ ಹೋಗಿದ್ದಾರೆ ಅಂತ ಉತ್ತರ ಬಂತು. ನೀವು ಯಾರು ಅಂದರೆ ನಾನು ಅವರ ಪಿಎ ಅಂದರು. ಪಿಎಗೂ ಪಿಎ ಇದ್ದಾರಾ? ಅಂತ ಕೇಳಿದೆ. ಪಿಎ ಅಷ್ಟೇ ಏಕೆ ಸಾರ್, ಗನ್ ಮ್ಯಾನ್ ಕೂಡ ಇದ್ದಾರೆ, ಅಂದರು. ಆ ಗನ್ ಮ್ಯಾನ್ ಗೂ ಗನ್ ಮ್ಯಾನ್ ಇದ್ದಾರಾ ಅಂತ ಕೇಳೋಣ ಅನ್ನಿಸಿತು. ಅವರು ಹೂಂ ಅಂತ ಅಂದರೆ ನನಗೆ ತಕ್ಷಣ ಜ್ವರ ಬರುವ ಸಾಧ್ಯತೆ ಇತ್ತಾದ್ದರಿಂದ ಸುಮ್ಮನಿದ್ದೆ.
ತಿಂಡಿ ಮುಗಿಸಿ ರೆಡ್ಡಿ ಅವರ ಮನೆ ‘ಕುಟೀರ ದ ಕಡೆ ಹೊರಟೆವು. ಹೆಸರಿನಲ್ಲೇನಿದೆ ಅಂತ ಕೇಳುವವರಿಗೆ ಈ ಮನೆ ತೋರಿಸಬೇಕು. ಹಿಮಾಚಲ ಪ್ರದೇಶದ ಹಿಲ್ ರಿಸಾಟ್ ಶೈಲಿಯಲ್ಲಿ ಕಟ್ಟಿದ ಈ ಮನೆಯ ಎಕರೆಗಟ್ಟಲೆ ಪ್ರದೇಶದಲ್ಲಿ ಇದೆ. ಮನೆಯ ಹಿಂದೆ ಒಂದು ದೊಡ್ಡ ಗುಡ್ಡ ಇದೆ.
ಆ ಮನೆಗೆ ಎಷ್ಟು ಬಾಗಿಲುಗಳು ಇವೆ ಅಂತ ಅಲ್ಲಿರುವವರಿಗೇ ಗೊತ್ತಿಲ್ಲ ಅಂತ ಜನ ಆಡಿಕೊಳ್ಳುತ್ತಾರೆ. ಅದಕ್ಕೇ ಇರಬೇಕು ಆ ಮನೆಗೆ ಹೊರಗಿನವರು ಹೋದರೆ ಅವರಿಗೆ ದಾರಿ ತೋರಿಸಲು ಒಬ್ಬ ಗೈಡ್ ಥರ ಜೊತೆಗೆ ಬರುತ್ತಾರೆ. ಈ ಮನೆ ಕಟ್ಟಿದವರು ಬಹಳ ದೊಡ್ಡ ಆರ್ಕಿಟೆಕ್ಟ್ ಅಂತ ನಮ್ಮ ಜೊತೆಗೆ ಬಂದವರು ಹೇಳಿದರು. ಮನೆ ಕಟ್ಟಿದವರೇ ಗುಡ್ಡವನ್ನೂ ಕಟ್ಟಿರಬೇಕು ಅಂತ ನಾನು ಅಂದುಕೊಂಡೆ.
ಆ ಕಟ್ಟಿಗೆ ಮತ್ತು ಹುಲ್ಲಿನ ಕುಟೀರದಲ್ಲಿ ಸುಮಾರು ಒಂದು ಡಜನ್ ಹೆವಿ ಡ್ಯೂಟಿ ಎಸಿ ಗಳು ಇವೆ. ಮನೆಯ ಸುತ್ತ ಮುತ್ತ ಮಷಿನ್ ಗನ್ ಹಿಡಿದುಕೊಂಡ ನೂರಾರು ಗಾಡ್ ಗಳು ಇದ್ದಾರೆ.

ಜನಾರ್ಧನ ರೆಡ್ಡಿ ಅವರನ್ನು ಅವರ ಮನೆ, ಕಚೇರಿಯಲ್ಲಿ ಕೆಲಸ ಮಾಡುವರೆಲ್ಲ ಕರೆಯುವುದು ಚೇರ್ಮನ್ ಸಾಹೇಬರು ಅಂತಲೇ. ಮಂತ್ರಿಗಿರಿ ಯ ಕುರ್ಚಿಗೆ ಅಂಟಿಕೊಂಡು ಕೂತ ಅವರು ಅದನ್ನು ಬಿಟ್ಟು ಇಳಿಯಲಾರರು ಅಂತ ಅದರ ಅರ್ಥ ಅಲ್ಲ.
ಬಹಳ ಹಿಂದೆ ಅವರು ಎನ್ನೋಬಲ್ ಇಂಡಿಯಾ ಎನ್ನುವ ಫೈನಾನ್ಸ್ ನಡೆಸುತ್ತಿದ್ದರು. ಅದಕ್ಕೆ ಅವರು ಚೇರ್ಮನ್ ಆಗಿದ್ದರು. ಇನ್ನೂ ಇದ್ದಾರೆ. ಅದು ಬೇರೆಯವರಿಗೆ ನೋಬಲ್ ಸೇವೆ ಮಾಡದೇ ಇದ್ದರೂ ಇವರು ಶಕ್ತಿಯುತ ನಾಯಕರಾಗಲು ಎನ್ನೇಬಲ್ ಮಾಡಿತು ಎಂದು ಅಲ್ಲಿನ ಜನ ಆಡಿಕೊಳ್ಳುತ್ತಾರೆ.
ಎನ್ನೋಬಲ್ ಇಂಡಿಯಾದ ಕಚೇರಿಯಲ್ಲಿ ತುಂಬ ಶಿಸ್ತು ಇತ್ತಂತೆ. ಮಿಲಿಟರಿ ಕ್ಯಾಂಪ್ ಥರ. ದಿನಾ ಬೆಳಿಗ್ಗೆ ಚೇರ್ಮನ್ನರು ಬಂದಾಗ ಸೆಕ್ಯೂರಿಟಿ ಗಾರ್ಡ್ ಶಿಸ್ತಿನಿಂದ ಸೆಲ್ಯೂಟ್ ಹೊಡೆಯಬೇಕು, ಅಲ್ಲಿನ ನೌಕರದಾರರೆಲ್ಲ ಶಿಸ್ತಿನಿಂದ ಇನ್ ಶಟ್ ಹಾಕಿಕೊಂಡಿರಬೇಕು, ನೀಟಾಗಿ ಶೇವ್ ಮಾಡಿಕೊಂಡಿರಬೇಕು, ವಾರಕ್ಕೆ ಒಂದಾದರೂ ಚಿರಂಜೀವಿ ಸಿನಿಮಾ ನೋಡಬೇಕು, ನೋಡಿ ಬಂದ ಮೇಲೆ ಕಚೇರಿಯ ಇತರರ ಮುಂದೆ ಆ ಸಿನಿಮಾದ ಕೆಲವು ಡಯಲಾಗುಗಳನ್ನಾದರೂ ಹೇಳಲೇ ಬೇಕು. ಬರದಿದ್ದರೂ ಡ್ಯಾನ್ಸ್ ಮಾಡಲೇಬೇಕು. ಹೀಗೆ ಎಲ್ಲದರ ಬಗ್ಗೆ ಶಿಸ್ತು ಇರಲೇಬೇಕು.
ಇಂದಿಗೂ ಬಳ್ಳಾರಿಯಲ್ಲಿ ಎನ್ನೋಬಲ್ ಇದೆ. ಸಾಹೇಬರ ಚೇರ್ಮನ್ ಗಿರಿ ಮುಂದುವರೆದಿದೆ.
ಕೊನೆಗೆ ಚೇರ್ಮನ್ ಸಾಹೇಬರು ಬಂದರು. ನೀವು ಇಲ್ಲಿಯ ರಾಜರಂತೆ, ಅಂತ ಜಿಮ್ಮಿ ಕೇಳಿದ. ಅಲ್ಲ ಸ್ವಾಮಿ, ನಾವು ರಾಜರಲ್ಲ. ನೋ ನೋ ನೋ ನೋ ಅಂತ ಸದನದಲ್ಲಿ ಮಾತಾಡಿದ ಹಾಗೆ ಒತ್ತಿ ಒತ್ತಿ ಹೇಳಿದರು.
ನಾವು ರಾಜರಲ್ಲ ಸ್ವಾಮಿ, ದೇವರ ಸೇವಕರು. ಹಿಂದೆ ಓಡಾಡಲು ಗಾಡಿ ಇಲ್ಲದ ನಮಗೆ ಇಂದು ದೇವರು ಹೆಲಿಕ್ಯಾಪ್ಟರ್ ಕೊಟ್ಟಿದ್ದಾನೆ. ಈ ಬಳ್ಳಾರಿಯನ್ನು, ಈ ಸುಂದರವಾದ ಗಣಿಗಳನ್ನು, ಆ ದೇವರೇ ಕೊಟ್ಟಿದ್ದಾನೆ. ಇನ್ ಫ್ಯಾಕ್ಟ್ ತಿರುಪತಿ ತಿಮ್ಮಪ್ಪ ನಮ್ಮ ಬಿಸಿನೆಸ್ ಪಾರ್ಟನರ್ ಇದ್ದಂತೆ. ವರ್ಷಕ್ಕೊಮ್ಮೆ ನಾವು ಅವರ ಪಾಲು ಅವರಿಗೆ ಕೊಟ್ಟು ಬರುತ್ತೇವೆ. ಹೋದ ವರ್ಷ ತಿಮ್ಮಪ್ಪನಿಗೆ ೫೦ ಕೋಟಿ ರೂಪಾಯಿಯ ಕಿರೀಟ ಕೊಡಲಿಲ್ಲವೇ, ಕೇಳಿ ಬೇಕಾದರೆ ಅಂದರು.
ಆ ತಿಮ್ಮಪ್ಪನ ಫೋನ್ ನಂಬರ್ ಕೊಡಿ ನಾನು ಆಮೇಲೆ ಮಾತಾಡುತ್ತೇನೆ ಅಂತ ಜಿಮ್ ಎಲ್ಲಿ ಅಂದು ಬಿಡುತ್ತಾನೋ ಅಂತ ನಾನು "ಅವರು ಹೇಳಿದ್ದು ಜನರನ್ನು ಕೇಳಿ ಅಂತಅಂತ ನಾನು ನಡುವೆ ಮಾತಾಡಿದೆ.
ಅಲ್ಲ ಸ್ವಾಮಿ, ಕೃಷ್ಣ ದೇವರಾಯನ ಕಾಲದ ಬಗ್ಗೆ ನಾವು ಪ್ರೈಮರಿ ಸ್ಕೂಲ್ ನಲ್ಲಿ ಕಲಿತಿದ್ದೇನು? ಆಗ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಮುತ್ತು ರತ್ನಗಳನ್ನು ಮಾರಾಟ ಮಾಡುತ್ತಿದ್ದರು ಅಂತ ತಾನೆ?
ನಾವು ವಿಜಯನಗರದ ವೀರ ಪುತ್ರರಲ್ಲವೇ, ಅವರ ಸಂಪ್ರದಾಯ ಮುಂದುವರೆಸಬೇಕಲ್ಲವೇ? ನಮಗೆ ಮುತ್ತು ರತ್ನ ಸಿಗುತ್ತಿಲ್ಲ. ನಮಗೆ ಸಿಕ್ಕಿದ್ದು ಶುದ್ಧವಾದ, ಪರಿಮಳ ಯುಕ್ತವಾದ ಕೆಂಪು ಮಣ್ಣು. ಅದನ್ನಾದರೂ ಮಾರಬೇಡವೇ? ೧೬ನೇ ಶತಮಾನದ ವ್ಯಾಪಾರಿಗಳು ಕೇವಲ ಹಂಪಿಯ ಬೀದಿಯಲ್ಲಿ ಅಂತದ್ದೆಲ್ಲ ಮಾರಾಟ ಮಾಡಿದರೆ ನಾವು ೨೧ನೇ ಶತಮಾನದವರಾದ ನಾವು ಬೀಜಿಂಗ್ ನ ಬೀದಿಗಳಿಗಾದರೂ ಹೋಗಬಾರದೇ? ಅಂತ ವಾದ ಮಾಡಿದರು.
ಅಷ್ಟರಲ್ಲಿ ನನ್ನ ಕಣ್ಣಿಗೆ ಬಿದ್ದಿದ್ದು ನನ್ನ ಆತ್ಮೀಯ ಸ್ನೇಹಿತ ರಾಮು ಅವರು. ಅವರನ್ನು ಬಳ್ಳಾರಿಯಲ್ಲಿ ಶ್ರೀರಾಮುಲು ಅಂತಲೂ, ಗದಗ್ ಜಿಲ್ಲೆಯಲ್ಲಿ ಮಗಧೀರ ಅಂತಲೂ, ದೆಹಲಿ ಕಡೆಯಲ್ಲಿ ತಾಯಿಗೆ ತಕ್ಕ ಮಗ ಅಂತಲೂ ಕರೆಯುತ್ತಾರೆ.
ಶ್ರೀರಾಮುಲು ಅವರು ಕಪ್ಪು ಬಟ್ಟೆ ಹಾಕಿಕೊಂಡು ತಲೆ ಬೋಳಿಸಿಕೊಂಡು ಚಪ್ಪಲಿ ಇಲ್ಲದೇ ಕೂತಿದ್ದರು. ಇವರು ಅಯ್ಯಪ್ಪ ಸ್ವಾಮಿಯ ವೃತ ಮಾಡಿ ತಿರುಪತಿಗೆ ಹೋಗಿಬಂದಿರಬಹುದು, ಬಹುಶಃ ಇವರಿಗೂ ಕರುಣಾಕರ ರೆಡ್ಡಿ ಅವರು ಪುರಾಣದ ಕತೆ ಹೇಳಿರಬೇಕು. ಸ್ವಾಮಿ ಅಯ್ಯಪ್ಪ ಹಾಗು ಪದ್ಮಾವತಿ ಕಲ್ಯಾಣದ ಕತೆ ಹೇಳುವಾಗ ಅವರಿಗೆ ಕನಫ್ಯೂಸ್ ಆಗಿರಬೇಕು ಅಂತ ಅನ್ನಿಸಿತು. ಶ್ರೀರಾಮುಲು ಅವರ ಕರಾಟೆ ಕೌಶಲ್ಯದ ಕತೆ ಕೇಳಿದ್ದ ನನಗೆ ಹೌದೇ ಅಂತ ಕೇಳುವ ಧೈರ್ಯ ಆಗಲಿಲ್ಲ.
ಅವರು ಚೇರ್ಮನ್ನರ ಮನೆ ಎದುರಿನ ಲಾನ್ ನ ಹುಲ್ಲಿನಲ್ಲಿ ಕೂತಿದ್ದರು. ಅವರ ಕಡೆ ನೋಡುತ್ತಿದ್ದ ಜಿಮ್ ಅವರಿಗೆ ಚೇರ್ಮನ್ನರು ‘ಅವರು ರಾಜ್ಯದ ಆರೋಗ್ಯ ಸಚಿವರು ಅಂತ ಪರಿಚಯ ಮಾಡಿಸಿದರು. ಶ್ರೀರಾಮುಲು ಅವರು ಎದ್ದು, ಅರ್ಧ ಬಗ್ಗಿ ನಮಸ್ಕಾರ ಮಾಡಿ ತರಾತುರಿ ಯಿಂದ ಹೊರಟು ಹೋದರು.
ಈ ವಿಷಯ ಜಿಮ್‌ನ ಕುತೂಹಲ ಕೆರಳಿಸಿತು. ಮೋಹನದಾಸ್ ಕರಮಚಂದ್ ಗಾಂಧಿ ಅವರು ನೆಲದ ಮೇಲೆ ಕೂಡುವಾಗ ಎಟ್ ಲೀಸ್ಟ್ ಚಾಪೆ ಹಾಸಿಕೊಳ್ಳುತ್ತಿದ್ದರು. ಇವರು ಡೈರೆಕ್ಟ್ ಆಗಿ ಹುಲ್ಲಿನ ಮೇಲೆ ಕೂತಿದ್ದಾರೆ. ಇವರ‍್ಯಾರೋ ದೊಡ್ಡ ಯೋಗಿಯೇ ಇರಬೇಕು. ಆಫ್ಟರಾಲ್ ಭಾರತದಲ್ಲಿ ಜನರಿಗಿಂತ ಬಾಬಾಗಳೇ ಜಾಸ್ತಿ ಇದ್ದಾರೆ ಅಂತ ಅಂದ.
ಈ ರೆಡ್ಡಿ ಅವರಿಗಿಂತ ಇವರೇ ಹೆಚ್ಚು ಇಂಟೆರೆಸ್ಟಿಂಗ್ ಆಗಿದ್ದಾರೆ. ಇವರನ್ನೇ ಇಂಟರವ್ಯೂ ಮಾಡೋಣ ಅಂತ ಅಂದ.
ನಾನು ಶ್ರೀರಾಮುಲು ಅವರನ್ನು ಹುಡುಕಿಕೊಂಡು ಅವರು ಹೋದ ದಿಕ್ಕಿನಲ್ಲಿ ಓಡಿಹೋದೆ. ಆದರೆ ಅಷ್ಟರಲ್ಲಿ ಅವರ ಕಾರುಗಳು ಗೇಟು ದಾಟಿ ಆಗಿತ್ತು.
ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
ಅಂತೂ ಕುಟೀರದಿಂದ ಹೊರ ಬಂದೆ. ಶ್ರೀರಾಮುಲು ಅವರ ಕಾರುಗಳು ಎಲ್ಲಿ ಹೋದವು ಅಂತ ಪೊಲೀಸರನ್ನು ಕೇಳಿದೆ. `ನಮಗೆ ಗೊತ್ತಿರಲ್ಲ ಸ್ವಾಮಿ, ಅವರು ಕರ್ನಾಟಕ ಪೊಲೀಸರ ಸಹವಾಸವೇ ಬೇಡ ಅಂತ ಸ್ಕಾಟ್ ಲ್ಯಾಂಡ್ ಯಾರ್ಡ್ ನ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸೆಕ್ಯೂರಿಟಿಗಾಗಿ ನೇಮಿಸಿಕೊಂಡಿದ್ದಾರೆ. ಫಿಲ್ಮ್ ಶೂಟಿಂಗ್ ನಿಂದ ಬಿಡುವು ಸಿಕ್ಕಾಗ ಜೇಮ್ಸ್ ಬಾಂಡ್ ಕೂಡ ಬಂದು ಅವರ ಮನೆ ಕಾವಲು ಕಾಯ್ದು ಹೋಗುತ್ತಾನೆ' ಅಂತ ಅಂದರು. ನಾನು ಹೆಣ ಹೊತ್ತ ತ್ರಿವಿಕ್ರಮನ ಹಾಗೆ ಛಲ ಬಿಡದೇ ರಸ್ತೆಯ ಉದ್ದಕ್ಕೂ ನಿಂತ ಮಹಾಜನರನ್ನು ಕೇಳುತ್ತಾ ಹೋದೆ. ಸಚಿವರ ಕಾರಿನ ಕ್ಯಾರವಾನ್ ಅತ್ಯಾಧುನಿಕ ಮಲ್ಟಿಪ್ಲೆಕ್ಸ್ ಒಂದರ ಮುಂದೆ ನಿಂತಿತ್ತು.
ಧೀರ ಮಗ
ಅಲ್ಲಿ ನಮ್ಮ ಯುವ ನಾಯಕರು ಹಾಗು ಅವರ ಸ್ನೇಹಿತರ ಸಲುವಾಗಿ ಮಗಧೀರ ಭಾಗ ಎರಡು ಚಿತ್ರದ ಪ್ರದರ್ಶನ ಇತ್ತು. ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲವಲ್ಲ, ಇಲ್ಲಿಗೆ ಹೇಗೆ ಬಂತು ಅಂತ ಯೋಚಿಸುವಾಗ ಅಲ್ಲಿಗೆ ಮೆಗಾ ಸ್ಟಾರ್ ಚಿರಂಜೀವಿ ಹಾಗು ಅವರ ಧೀರ ಮಗ ಬಂದರು. `ಹೊಸ ಫಿಲಂ ರಿಲೀಸ್ ಗೆ ಮುಂಚೆ ಬಳ್ಳಾರಿ ಪ್ರಭುಗಳಿಗೆ ತೋರಿಸಿ ಹೋಗೋಣ ಅಂತ ಬಂದಿದ್ದೇವೆ. ಏನೇ ಅಂದರೂ ನಮ್ಮದು ಪ್ರಜಾರಾಜ್ಯಂ ಅಲ್ಲವೇ. ಇಲ್ಲಿ ಪ್ರಭುಗಳೇ ಪ್ರಜೆಗಳು' ಅಂತ ಅಂದರು. ಅವರ ಮಾತಿನ ಅರ್ಥ ಕೇಳಿದರೆ ಕೊಂಡವಿಟಿ ದೊಂಗ ಸ್ಟೈಲಿನಲ್ಲಿ `ಕಾವಾ ಪಂಗಾ,' ಅಂತ ಮುಷ್ಟಿ ಬಿಗಿ ಹಿಡಿದು ಕೇಳುತ್ತಾರೆ ಅಂತ ಗೊತ್ತಾಯ್ತು. ನಕ್ಕೆ.
ಇಡೀ ಸಿನಿಮಾ ಥಿಯೇಟರ್ ನಲ್ಲಿ ಸಚಿವರು ಹಾಗು ಅವರ ಮಿತ್ರರನ್ನು ಬಿಟ್ಟು ಬೇರೆ ಯಾರು ಇರಲಿಲ್ಲ. ಸಚಿವರ ಸ್ನೇಹಿತರು ಟೀ ಕುಡಿಯಬೇಕೆಂದಾಗ, ಚಿತ್ರದ ಕತೆಯ ಬಗ್ಗೆ ಚರ್ಚೆ ನಡೆಸಬೇಕೆಂದಾಗ, ಮೂತ್ರ ವಿಸರ್ಜನೆಗೆ ಹೋದಾಗ ಚಿರಂಜೀವಿಯವರು ಚಿತ್ರವನ್ನು 5-10 ನಿಮಿಷ ನಿಲ್ಲಿಸುತ್ತಿದ್ದರು. ಇದೆಲ್ಲ ನೋಡಿ ನಿಜವಾದ ಮಗಧೀರರು ಯಾರು ಅಂತ ನನಗೆ ಸಂದೇಹ ಉಂಟಾಯ್ತು.
ಕೊನೆಗೂ ಶ್ರೀರಾಮುಲು ಹೊರಗೆ ಬಂದರು. ಜಿಮ್ ನನ್ನೂ, ಅವರ ಜತೆ ಇದ್ದ ನಮ್ಮನ್ನೂ ನೋಡುತ್ತಲೇ ಈ ಕಡೆ ಬಂದರು. ಅತ್ಯಂತ ಪ್ರೀತಿಯಿಂದ ಎರಡು ತಾಸು ಮಾತಾಡಿದರು. ಅವರ ಸಂದರ್ಶನದ ಮುಖ್ಯ ಭಾಗ ಇದು.
`ಈನೋ ತೊಗೋಳ್ಳಿ'
ಕರ್ನಾಟಕದಲ್ಲಿ ವಿರೊಧ ಪಕ್ಷದವರಿಗೆ ಕೆಲಸ ಇಲ್ಲ. ನಮ್ಮ ಮೇಲಿನ ಹೊಟ್ಟೆ ಉರಿಗೆ ಏನೇನೋ ಆರೋಪ ಮಾಡುತ್ತಾರೆ. ಕೈ ಕಡಿತ ಆರಂಭವಾದರೆ ಧಿಕ್ಕಾರ ಹಾಕುತ್ತಾರೆ, ಕಾಲು ಕಡಿತ ಆರಂಭವಾದರೆ ಪಾದಯಾತ್ರೆ ಮಾಡುತ್ತಾರೆ. ನನ್ನ ಸ್ನೇಹಿತರಾದ ಡಿಕೆಶಿ, ಕುಮಾರಣ್ಣ, ಉಗ್ರಪ್ಪ ಅವರಿಗೆ, ಹಿರಿಯರಾದ ಸಿದ್ಧರಾಮಯ್ಯ, ದೇಶಪಾಂಡೆ, ಅವರಿಗೆ ನಾನು ಹೇಳಿದ್ದೇನೆ. ಆರೋಗ್ಯದ ಕಾಳಜಿ ಮಾಡಿಕೊಳ್ಳಿ, ಏನಾದರೂ ತೊಗೊಳ್ಳಿ, ಕೊನೆಗೆ ಈನೋ ತೊಗೊಳ್ಳಿ, ಅಂತ ಅವರು ಕೇಳೋದಿಲ್ಲ. ನಮಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಲ್ಲೇ ಟ್ರೀಟ್ ಮೆಂಟ್ ಬೇಕು ಅಂತ ಹಟ ಮಾಡ್ತಾರೆ. ಅಲ್ಲ ಸ್ವಾಮಿ, ನಮ್ಮ ಸರಕಾರದ ಗೋಹತ್ಯೆ ಬಿಲ್ ವಿರೋಧಿಸುವವರಿಗೆ ನಮ್ಮ ಸರಕಾರದ ಕಲ್ಯಾಣ ಕಾರ್ಯಕ್ರಮ ಏಕೆ ಬೇಕು ಹೇಳಿ? ಅಂದರಕಿನಾ ನಾನು ಅವರನ್ನು ದ್ವೇಷ ಮಾಡಿಲ್ಲ. ಅವರ ಪಾದಯಾತ್ರೆಯ ಜತೆ ನಮ್ಮ 108 ಆಂಬುಲೆನ್ಸ್ ಗಳನ್ನು ಕಳಿಸಿದ್ದೇನೆ.
ವಾಜಪೇಯಿ ಪಾಡು
ಸ್ವಾಮಿ ಈ ಕೇಂದ್ರ ಸರಕಾರದವರು ಎಲ್ಲ ರೇಟ್ ಹೆಚ್ಚು ಮಾಡಿದ್ದಾರೆ. ಹಾಲು, ಸಕ್ಕರೆ, ಟೀ ಪುಡಿ, ಎಲ್ಪಿಜಿ, ಸೀಮೆ ಎಣ್ಣೆ ಹೀಗೆ. ಹೀಗಾದರೆ, ದೆಹಲಿಯಲ್ಲಿ ನಮ್ಮ ನಾಯಕರು ಬಾಳ್ವೆ ಮಾಡೋದು ಹೇಗೆ? ವಾಜಪೇಯಿ ಅವರು ಬಿಡಿ. ಅವರು ಒಬ್ಬರೇ ಇದ್ದಾರೆ, ಅಡ್ವಾಣಿ ಅವರ ಮನೆಗೆ ಊಟಕ್ಕೆ ಹೋಗ್ತಾರೆ. ಬೇರೆಯವರದು ಏನು ಕತೆ?
ನೂಯಿ ಏಕೆ ಇಂದಿರಾ?
ಬಳ್ಳಾರಿಯಲ್ಲಿ ಜನರಿಗೆ ಕುಡಿಯುವ ನೀರಿಲ್ಲ ಅಂತ ವಿರೋಧ ಪಕ್ಷದವರು ಆರೋಪ ಮಾಡ್ತಾರೆ. ಇದೆಲ್ಲ ನಮ್ಮ ಯಶಸ್ಸು ತಾಳಲಾರದವರು ಆಡೊ ಮಾತು ಸ್ವಾಮಿ. ಅಂದರಕಿನಾ, ನಾವು ಅವರ ಮಾತುಗಳನ್ನು ಹಗುರವಾಗಿ ತೆಗೊಳ್ಳೋದಿಲ್ಲ. ಜಿಲ್ಲೆಯಲ್ಲಿ ನಾವು ಎಲ್ಲರಿಗೂ ಬಿಸ್ಲೆರಿ ನೀರನ್ನೇ ಕೊಡಬೇಕು ಅಂತ ಇದ್ದೇವೆ. ಒಬ್ಬರಿಗೆ ಒಂದು ದಿನಕ್ಕೆ ಎರಡೂವರೆ ಲೀಟರ್ ನೀರು ಎಂದರೂ ಇಡೀ ಜಿಲ್ಲೆಗೆ ದಿನಕ್ಕೆ ಟಿಎಂಸಿಗಟ್ಟಲೇ ನೀರು ಬೇಕು. ಮೊದಲೆಲ್ಲ ರಾಜ್ಯದ ಯಾವುದಾದರೂ ನದಿಯನ್ನು ಬಳ್ಳಾರಿ ಕಡೆ ತಿರುಗಿಸೋಣ ಅಂದುಕೊಂಡಿದ್ದೆವು. ಆದರೆ ಅದು ಲೇಟಾಗಬಹುದು, ಆ ಆರುಂಧತಿ ರಾಯ್, ಮೇಧಾ ಪಾಟ್ಕರ್ ಅವರಿಗೆಲ್ಲ ನಮ್ಮ ಬಗ್ಗೆ ಮಾತಾಡಲಿಕ್ಕೆ ಅವಕಾಶ ಕೊಟ್ಟಂತಾಗಬಹುದು ಅಂತ ಆ ಐಡಿಯಾ ಕೈಬಿಟ್ಟೆವು. ಈಗ ಬಳ್ಳಾರಿ ಜಿಲ್ಲೆಗಾಗಿಯೇ ಒಂದು ಬಿಸ್ಲೆರಿ ಪ್ಲಾಂಟ್ ಮಾಡಬೇಕು ಅಂತ ಕೋಕಾ ಕೋಲಾ, ಪೆಪ್ಸಿ ಅವರಿಗೆಲ್ಲ ಹೇಳಿದ್ದೇವೆ. ಅವರು ತುಂಗಭದ್ರಾ ಡ್ಯಾಮಿನ ನೀರು ಬೇಕು ಅಂತ ಕೇಳಿದ್ದಾರೆ. ನಾವು ಕಮ್ಮಿ ನೀರು ಕೊಡೋದು, ಆಮೇಲೆ ಅವರು ಕಿರಿಕಿರಿ ಮಾಡೋದು ಎಲ್ಲಾ ಬೇಡ ಅಂತ ಆ ಡ್ಯಾಮಿನ ಉಸ್ತುವಾರಿಯನ್ನೇ ಅವರಿಗೆ ಕೊಟ್ಟು, ನಮ್ಮ ರೈತರಿಗೆ, ರಾಜ್ಯ ವಿದ್ಯುತ್ ನಿಗಮಕ್ಕೆ ಬೇಕಾದಾಗ, ಸ್ವಲ್ಪ ಸ್ವಲ್ಪ ಬಿಡಿ ಅಂತ ಹೇಳಿದರಾಯ್ತು ಅಂದುಕೊಂಡಿದ್ದೇವೆ. ಅಂದಹಾಗೆ ಆ ಪೆಪ್ಸಿ ಕಂಪನಿಯ ಸಿಈಓ ಹೆಸರು ಇಂದಿರಾ ನೂಯಿ ಅಂತೆ. ಅದು ಬಳ್ಳಾರಿಯ ಜನರ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಂತೆ. `ನಿಮಗೆ ನೀರು ಬೇಕೆಂದರೆ ನೀವು ಹೆಸರು ಬದಲಿಸಿಕೊಳ್ಳಬೇಕು. ಸುಷ್ಮಾ, ವಸುಂಧರಾ, ಉಮಾ, ವಿಜಯರಾಜೇ ಅಂತ ಯಾವುದಾದರೂ ಹೆಸರು ಇಟ್ಟುಕೊಳ್ಳಿ' ಅಂತ ಅವರಿಗೆ ಮೇಲ್ ಕಳಿಸಿದ್ದೇವೆ.
ಹೆಲಿಕಾಪ್ಟರ್ ಇಲ್ಲದ ಪೈಲಟ್
ಬಡತನ ನಿರ್ಮೂಲನೆ ಯೋಜನೆ ನಾವು ಮಾಡಿಲ್ಲ ಎನ್ನುವುದು ಇನ್ನೊಂದು ಸುಳ್ಳು ಆರೋಪ. ನೋಡಿ ನಮ್ಮ ಪ್ರಯತ್ನದಿಂದಾಗಿ ಗಾಲಿ ಜನಾರ್ಧನ ರೆಡ್ಡಿ ಹಾಗು ಬಿ ಶ್ರೀರಾಮುಲು ಕುಟುಂಬ, ಎಂಟು ಶಾಸಕರು, ಮೂರು ಸಂಸತ್ ಸದಸ್ಯರು, ಎಲ್ಲಾ ಪಕ್ಷದ ಜಿಲ್ಲಾ ಪಂಚಾಯತಿ, ತಾಲೂಕು ಹಾಗು ಗ್ರಾಮ ಪಂಚಾಯಿತಿ ಸದಸ್ಯರು, ನಗರಪಾಲಿಕೆ, ನಗರಸಭೆ, ಪುರಸಭೆ ಸದಸ್ಯರು, ನಮ್ಮ ಪಕ್ಷದ ವಿವಿಧ ಪ್ರಕೋಷ್ಟಗಳ ಪದಾಧಿಕಾರಗಿಗಳು ಇವರೆಲ್ಲರ ಕುಟುಂಬಗಳ ಬಡತನ ನಿರ್ಮೂಲನೆ ಮಾಡಿಲ್ಲವೇ? ಇದು ಪೈಲಟ್ ಪ್ರೊಜೆಕ್ಟು. ಇದು ಯಶಸ್ವಿಯಾದರೆ, ಇದೇ ಯೋಜನೆಗಳನ್ನು ಜಿಲ್ಲೆಯ ಇತರ ಕುಟುಂಬಗಳಿಗೆ ಜಾರಿಮಾಡುತ್ತೇವೆ.
ಜನರಿಂದ ನಾನು ಮೇಲೆ ಬಂದೆ
ಎಲ್ಲ ನಾಯಕರು ಊರಿಗೊಂದು ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಮಾಡಿದ್ದರೆ ನಾವು ರೋಡಿಗೊಂದು ಮಾಡಿದ್ದೇವೆ. ಸರ್, ನೋಡಿ, ಬಳ್ಳಾರಿಯಲ್ಲಿ ಜನ ತಮ್ಮ ತಮ್ಮ ಮನೆಯ ಮುಂದಿನ ರೋಡುಗಳಲ್ಲಿ ಸಣ್ಣ ಸಣ್ಣ ಗುಂಡಿಗಳನ್ನು ಮಾಡಿಕೊಂಡಿದ್ದಾರೆ. ಮೈನ್ ಲಾರಿಗಳು ಆ ಗುಂಡಿಗಳಲ್ಲಿ ಸ್ಕೇಟಿಂಗ್ ಮಾಡುತ್ತಾ ಮುಂದೆ ಹೋಗುವಾಗ ಸ್ವಲ್ಪ ಅದಿರು ಅಲ್ಲಿ ಇಲ್ಲಿ ಬೀಳುತ್ತದೆ. ಅದನ್ನು ಅವರು ಮಾರಿಕೊಳ್ಳುತ್ತಾರೆ. ಒಳ್ಳೇ ಲಾಭ ಬರ್ತದೆ. ಇದಕ್ಕಿಂತ ಸ್ಮಾಲ್ ಆಗಿರೋ ಯಾವುದಾದರೂ ಇಂಡಸ್ಟ್ರೀ ಇದೆಯಾ? ಈ ಥರಾ ಜೀರೋ ಇನ್ವೆಸ್ಟ್ ಮೆಂಟ್ ನ ಸಣ್ಣ ಕೈಗಾರಿಕೆಯನ್ನು ಯಾವ ಪಕ್ಷದವರು ಮಾಡಿದ್ದಾರೆ ಹೇಳಿ? ಜನರಿಂದ, ಜನರಿಗಾಗಿ, ಜನರೇ ಮಾಡಿದ ಆ ಗುಂಡಿಗಳನ್ನು ಮುಚ್ಚಲು ನಾವು ಯಾವ ಪಿಡ್ಲ್ಯೂಡಿ ಇಂಜಿನಿಯರಗೂ ಬಿಟ್ಟಿಲ್ಲ.
ಬರೀ ಸಾಧನಾ ಯಾಕೆ?
ಕೇಂದ್ರ ಸರಕಾರದವರು ಉದ್ಯೋಗ ಖಾತ್ರಿ ಯೋಜನೆ ಮಾಡಿದ್ದಾರೆ. ನಾವೂ ನಮಗೆ ತಿಳಿದಂತೆ ಒಂದು ಯೋಜನೆ ಮಾಡಿದ್ದೇವೆ. ಅದರ ಹೆಸರು ಸಮಾವೇಶ ಯೋಜನೆ. ನಾವು ವಾರಕ್ಕೆ ಎರಡರಂತೆ ಸಮಾವೇಶ ಮಾಡುತ್ತೇವೆ. ಸಾಧನಾ ಸಮಾವೇಶ, ಬಬಿತಾ ಸಮಾವೇಶ, ಹೇಮಾಮಾಲಿನಿ ಸಮಾವೇಶ, ರಾಗಿಣಿ, ಪದ್ಮಿನಿ, ವೈಜಯಂತಿಮಾಲಾ ಸಮಾವೇಶ ಅಂತ ಏನಾದರೂ ಮಾಡುತ್ತಲೇ ಇರುತ್ತೇವೆ. ಇರಲಿ ಅಂತ ಒಂದೆರಡು ಮುಮ್ತಾಜ್, ವಹೀದಾ ರೆಹಮಾನ್, ಸಾಯಿರಾಬಾನೂ ಸಮಾವೇಶಗಳನ್ನೂ ಮಾಡುತ್ತೇವೆ. ಅದಕ್ಕೆ ಬರುವ ಜನರಿಗೆ ನಾವು ಉಪವಾಸ ಕಳಿಸುವುದಿಲ್ಲ. ಅವರಿಗೆ ಒಂದು ದಿನದ ಕೂಲಿ ಕೊಟ್ಟು, ಎರಡು ತಿಂಡಿ, ಒಂದು ಊಟ, ಒಂದು ಐಸ್ ಕ್ರೀಮ್ ಕೊಟ್ಟು ಕಳಿಸುತ್ತೇವೆ. ಅವರಿಗೆ ಸಮಾವೇಶದ ಸ್ಥಳಕ್ಕೆ ಹೋಗಲು ಬರಲು ಎಸಿ ಬಸ್ಸಿನಲ್ಲಿ ಪ್ರಯಾಣದ ವ್ಯವಸ್ಥೆ ಮಾಡುತ್ತೇವೆ. ಆ ಬಸ್ಸುಗಳಲ್ಲಿ ಭಾರಿ ಭರಕಮ್ ಸ್ಟಂಟುಗಳಿರುವ ತೆಲುಗು ಫಿಲಂ ತೋರಿಸುತ್ತೇವೆ. ಇದ್ದಕ್ಕಿಂತೂ ಖಾತ್ರಿ ಇರುವ ಉದ್ಯೋಗ ಬೇಕೆ ಸ್ವಾಮಿ, ಅಂದರು.
ಆ ರಾಜ ಈ ರಾಜ
ಜನಾರ್ಧನ ರೆಡ್ಡಿ ಅವರು ಅಂದರೆ ಸಾಮಾನ್ಯರಲ್ಲ ಸ್ವಾಮಿ, ಅವರು ಕೃಷ್ಣದೇವರಾಯನ ಅವತಾರ. ಒಂದು ಸೈಡಿನಿಂದ ಹಂಗೇ ಕಾಣಲ್ವ, ನೀವೇ ಹೇಳಿ. ಅದಕ್ಕೇ ನಾವು ಕೃಷ್ಣದೇವರಾಯನ 500 ನೇ ಸಿಂಹಾಸನ ಗೃಹಣ ಉತ್ಸವ ಮಾಡಿದಾಗ ಹಾಕಿದ ಬ್ಯಾನರ್, ಪೋಸ್ಟರ್ ಗಳಲ್ಲಿ, ಅಂದೆಲ್ಲೋ ಹಿಂದೆ ಆಗಿ ಹೋದ ರಾಜನಿಗಿಂತ ಈಗ ಆಳುತ್ತಿರುವ ರಾಜರ ಫೋಟೋಗಳನ್ನೇ ದೊಡ್ಡದಾಗಿ ಹಾಕಿದ್ದೆವು.
ನಾವು ಬಳ್ಳಾರಿಯಲ್ಲಿ ಹೊಸ ಯುನಿವರ್ಸಿಟಿ ಮಾಡಿದ್ವಲ್ಲ, ಅದಕ್ಕೆ ಜನಾರ್ಧನ ರೆಡ್ಡಿ ಅವರ ಹೆಸರೇ ಇಡಬೇಕು ಅಂತ ನಾನು ಪ್ರೋಪೊಸಲ್ ಇಟ್ಟಿದ್ದೆ. ಅಂದರಕಿನಾ, ರೆಡ್ಡಿ ಸಾಹೇಬರೇ ಬೇಡ ಅಂದರು. ಕೊನೆಗೆ ಬಳ್ಳಾರಿ ಜನ ಹಿಂದಿನವರನ್ನು ಮರೆತುಬಿಟ್ಟಾರು ಅಂತ ಕೃಷ್ಣದೇವರಾಯನ ಹೆಸರು ಇಟ್ಟೆವು.
ಹಂದಿ ಮತ್ತು ಯುದ್ಧ
ಕೊನೆಗೆ ಜಿಮ್ ಅವರು ನೀವು ಆರೋಗ್ಯ ಸಚಿವರಲ್ಲವೇ, ನಿಮ್ಮ ರಾಜ್ಯದಲ್ಲಿ ಎಚ್ಒನ್ ಎನ್ಒನ್ ಸ್ಥಿತಿ ಹೇಗಿದೆ ಅಂದರು. `ಅಯ್ಯೋ ಸರ್, ಅದು ಸಮಸ್ಯೆಯೇ ಅಲ್ಲ ಬಿಡಿ. ಮೊದಲ ವರ್ಷ ಅದು ಬಂದಾಗ ನಾವು ಹಂದಿ ಜ್ವರ ಅಂತ ತಿಳಕೊಂಡು ನಮ್ಮ ಪಶು ಸಂಗೋಪನಾ ಮಂತ್ರಿಗಳ ಖಾತೆಗೆ ಬರುತ್ತೆ ಅಂತ ಸುಮ್ಮನಾದೆವು. ಆದರೆ ಅದರ ಹೆಸರು ಯಾವಾಗ ಬದಲಾಯಿತೋ, ನಾವು ಅದರ ವಿರುದ್ಧ ಯುದ್ಧ ಸಾರಿ ಅದನ್ನ ಓಡಿಸಿಬಿಟ್ಟೆವು. ಈಗ ನಾವೆಷ್ಟು ತಯಾರಾಗಿದ್ದೇವೆಂದರೆ, ಈಗ ಎಚ್ಒನ್ ಎನ್ಒನ್ ಅಲ್ಲ, ಎಚ್ನೈನ್, ಎನ್ಟೆನ್ ಬಂದರೂ ಎದುರಿಸುತ್ತೇವೆ,' ಅಂದರು. ನಾನು ಅವರ ಕೊನೆಯ ವಾಕ್ಯವನ್ನು ಭಾಷಾಂತರಿಸಲೇ ಇಲ್ಲ.
ಶ್ರೀರಾಮುಲು ಅವರು ಮಾತು ಮಾತಿಗೆ ಬಂಧುಗಳೇ, ಅಂದರಕಿನಾ, ಅನ್ನುತ್ತಿದ್ದರು. ಮೊದಲನೆ ಪದವನ್ನು ಭಾಷಾಂತರಿಸಿದೆ. ಎರಡನೇಯದು ಆಗಲಿಲ್ಲ. `ಅಂದರಕಿನಾ' ಅನ್ನುವುದಕ್ಕೆ ಇಂಗ್ಲಿಷ್ ಶಬ್ದ ಏನು? ಅಂತ ಜಿಮ್ ಕೇಳಿದರು. ಅದಕ್ಕೆ ಕನ್ನಡದಲ್ಲಿಯೂ ಶಬ್ದ ಇಲ್ಲ, ಸಚಿವರ ಮೇಲಿನ ಪ್ರೀತಿಯಿಂದ ಮಹಾಜನತೆ ಅದನ್ನು ಸಂದರ್ಭಕ್ಕೆ ತಕ್ಕ ಹಾಗೆ ಅರ್ಥೈಸಿಕೊಳ್ಳುತ್ತಾರೆ ಅಂತ ಅಂದೆ.
ಯಾರು ಹನುಮನೋ ಯಾರು ರಾಮನೋ
ಇನ್ನು ಜನಾರ್ಧನ ರೆಡ್ಡಿ ಅವರು ಅವರ ಕಚೇರಿಯ ಸಿಬ್ಬಂದಿಗೆ ಚೇರ್ಮನ್ನರಾದರೆ, ಶ್ರೀರಾಮುಲು ಅವರು ಇಡೀ ಜಿಲ್ಲೆಗೆ `ಅಣ್ಣ'. ಉಳಿದವರೆಲ್ಲ ಅವರ ತಮ್ಮಂದಿರೇ. ಈ ನಾಯಕರ ಹೆಸರು ಕೋದಂಢಧಾರಿ ರಾಮನಾದರೂ, ಅವರು `ನಾನು ಎಲ್ಲರ ಸೇವಕ' ಎಂದು ಹನುಮಂತನಂತೆ ವಿನಮ್ರರಾಗಿ ಕೈ ಮುಗಿಯುತ್ತಾರೆ.
ಅವರನ್ನು ಕಂಡಾಗಲೊಮ್ಮೆ ನನಗೆ ಬೀದರ ಜಿಲ್ಲೆಯ ಹಿರಿಯಜ್ಜನಾಗಿದ್ದ ರಾಮಚಂದ್ರ ವೀರಪ್ಪ ಅವರ ನೆನಪಾಗುತ್ತದೆ. ಸ್ವಾತಂತ್ರ್ಯ ಸೇನಾನಿಯಾಗಿದ್ದ ಅವರ ಅಣ್ಣನ ಹೆಸರು ಲಕ್ಷಣ. `ಇದೇನು ಹಿಂಗ? ನೀವು ರಾಮ, ನಿಮ್ಮ ಅಣ್ಣ ಲಕ್ಷಣ ಯಾಕ' ಅಂತ ನಾನು ಒಂದು ಸಾರಿ ಕೇಳಿದ್ದೆ. ತಮ್ಮ ಜೀವನದ 96 ವರ್ಷಗಳಲ್ಲಿ ನನ್ನಂಥ 9600 ಪತ್ರಕರ್ತರನ್ನು ಕಂಡಿದ್ದ ಅವರು ತಮ್ಮ ಟ್ರೇಡ್ ಮಾರ್ಕ್ ತುಂಟ ನಗೆ ಬೀರಿದ್ದರು.
`ಅದನ್ನೇನು ಕೇಳ್ತಿಯೋ ದೇಸಾಯಿ, ನಮ್ಮಪ್ಪ ಇಟ್ಟಿದ್ದು ಹೆಸರು ಅದು. ಅವ ನಿಮ್ಮಪ್ಪನ ಹಂಗ ಸಾಲಿಗೆ ಹೋದವಲ್ಲ. ಅಲ್ಲೇ ಇಲ್ಲೇ ಥೋಡೆ ಥೋಡೆ ನೋಡಿದವ, ಕೇಳಿದವ, ಕಲ್ತವ. ಈ ಜಗತ್ತಿನ್ಯಾಗ ಯಾವಾನ ತಮ್ಮೋ ಯಾವಾನ ಅಣ್ಣೋ' ಅಂತ ಅಂದಿದ್ದರು. ರಾಮಚಂದ್ರ ವೀರಪ್ಪ ಅವರು ಶಾಲೆಗೆ ಹೋದವರಲ್ಲ. ಆದ್ದರಿಂದಲೇ ಅವರ ಅಪ್ರತಿಮ ಸಾಮಾನ್ಯ ಜ್ಞಾನವನ್ನು ಶಿಕ್ಷಣ ಹಾಳು ಮಾಡಿರಲಿಲ್ಲ. ಅವರು ಆಡಿದ ಕೊನೆಯ ಮಾತನ್ನು ನಾನು ಮರೆತೇ ಇಲ್ಲ.
ಈ ಶ್ರೀರಾಮುಲು ಹಾಗೂ ರೆಡ್ಡಿ ಅವರನ್ನು ನೋಡಿದಾಗ ನನಗೆ ಇದೇ ಮಾತು ನೆನಪಿಗೆ ಬರುತ್ತದೆ. ಇವರಲ್ಲಿ ಯಾರು ರಾಮನೋ, ಯಾರು ಹನುಮನೋ, ಯಾರು ಯಾರಿಗೆ ಗುರುವೋ, ಯಾರು ಶಿಷ್ಯರೋ, ಯಾರು ಯಾರಿಗೆ ಅನಿವಾರ್ಯವೋ, ಯಾರಿಲ್ಲದಿದ್ದರೆ ಯಾರಿಗೆ ಅಸ್ತಿತ್ವವಿಲ್ಲವೋ. ಯಾರೂ ಹೇಳಲಾರರು. ಅಂತೂ `ಈ ಜಗತ್ತಿನಲ್ಲಿ, ಯಾವನು ಅಣ್ಣನೋ, ಯಾವನು ತಮ್ಮನೋ'.
ಸಂಹಾರ
ಅಂದಹಾಗೆ ನನಗೆ ಅವತ್ತು ಬೆಳಿಗ್ಗೆ ಎಚ್ಚರವಾಗಿದ್ದು ಫೋನ್ ಬಂದಿದ್ದರಿಂದ ಅಲ್ಲ. ನನ್ನ ಮೊಬೈಲ್ ಫೋನಿನ ಅಲಾರಾಂ ಹೊಡಕೊಂಡಿದ್ದರಿಂದ.
ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಹೋಗಬೇಕು ಎನ್ನುವ ಘನ ಉದ್ದೇಶದಿಂದ ನಾನು ಮೊಬೈಲಿನಲ್ಲಿ ಅಲಾರಾಂ ಇಟ್ಟುಕೊಂಡಿದ್ದೆ. ಅದರಿಂದ ನನಗೆ ಎಚ್ಚರವಾಗಿತ್ತು. ಆದರೆ ನಾನು ಅದನ್ನು ಆಫ್ ಮಾಡಿ ಮತ್ತೆ ಮಲಗಿದೆನೆಂದೂ, ಎಷ್ಟು ಬೈದರೂ ಏಳಲಿಲ್ಲವೆಂದೂ ನನ್ನ ಹೆಂಡತಿ ನನಗೆ ಮಧ್ಯಾಹ್ನದ ನಂತರ ಹೇಳಿದಳು. ನಿದ್ದೆಯಲ್ಲಿ ಹಲವು ಬಾರಿ `ಎಚ್ಒನ್ ಎನ್ಒನ್' ಅಂತ ಬಡಬಡಿಸುತ್ತಿದ್ದೆನೆಂದೂ ಹೇಳಿದಳು. `ನಿಮಗೆ ಸುದ್ದಿಯ ಹುಚ್ಚು. ಎದ್ದಾಗೂ ಸುದ್ದಿ, ಕನಸಿನ್ಯಾಗೂ ಸುದ್ದಿ. ಅದರಿಂದ ನಮಗೆಲ್ಲಾ ಯಾವಾಗ ಬಿಡುಗಡೆ ಅದನೋ ಯಾವಾನಿಗೆ ಗೊತ್ತು' ಎಂದು ಮರುದಿನ ಬೆಳಿಗ್ಗೆ ತರಾಟೆ ತೆಗೆದುಕೊಂಡಳು. ನಾನು ರಾತ್ರಿ ಕೆಂಪು ಮಣ್ಣಿನ ಕನಸು ಕಂಡೆ ಅಂತ ಅವಳಿಗೆ ಹೇಳಲು ಹೋಗಲಿಲ್ಲ.
ಅವಳಿಂದ ಆ ವಿಷಯ ಮುಚ್ಚಿಟ್ಟೆ. ಆದರೆ, ಇತ್ತೀಚಿನ ಹಿಂದಿ ಚಿತ್ರ `ಕಾರ್ತಿಕ್ ಕಾಲಿಂಗ್ ಕಾರ್ತಿಕ್' ಸ್ಟೈಲಿನಲ್ಲಿ ನನ್ನ ಫೋನ್ ನಿಂದ ನಾನೇ ಮೋಸ ಹೋಗಿದ್ದೆ. ನನ್ನನ್ನು ನಾನು ಫರಹಾನ್ ಅಖ್ತರ್ ಅಂದುಕೊಂಡಿದ್ದಿರಬಹುದು. ಆದರೂ ನನ್ನ ಕನಸಿನಲ್ಲಿ ದೀಪಿಕಾ ಪಡುಕೋಣೆ ಬಂದಿರಲಿಲ್ಲ. (ಅಂದ ಹಾಗೆ ಜಿಮ್ ಜೊತೆಗೆ ಒಬ್ಬರು ಲೇಡಿ ಫೊಟೊಗ್ರಾಫರ್ ಬಂದಿದ್ದರು. ಅದು ಬೇರೆ ವಿಷಯ.) ದೀಪಿಕಾ ಬಂದಿದ್ದರೂ ನನ್ನ ಹೆಂಡತಿಗೆ ನಾನು ಅದನ್ನು ಹೇಳುತ್ತಿರಲಿಲ್ಲ!
ಇಲ್ಲೀಗೀ ಕತೆ...
(ಮುಂದಿನ ವಾರ: ಬಿಳಿಯರೊಂದಿಗೆ ಇನ್ನಷ್ಟು ದಿನಗಳು ಮತ್ತು ನವ್ಯೋತ್ತರ ವಸಾಹತುಶಾಹಿ.)

No comments: