Tuesday, February 15, 2011

Spoof of BJP government in Karnataka-2

ಬಳ್ಳಾರಿ ಗಣಿಗಾಥಾ: ಶ್ರೀರಾಮುಲು ಸ್ವಪ್ನ ವಿಮಾನಯಾನ
By ಹೃಷಿಕೇಶ್ ಬಹದ್ದೂರ್ ದೇಸಾಯಿ

ಆ ಫೋನು ನನಗೆ ಅಮರ ಚಿತ್ರಕಥಾದ ಆಕಾಶವಾಣಿಯಂತೆ ಕೇಳಿತು. ಆ ಕಡೆಯಿಂದ ಮಾತಾಡಿದವರು ಶ್ರೀರಾಮುಲು ಅವರ ಪಿಎ.

‘ಅಲ್ರೀ ಬಳ್ಳಾರಿಗೆ ಯಾಕೆ ಹೋದಿರಿ? ಸಾಹೇಬರು ಬೆಂಗಳೂರಿನ ಹತ್ತಿರ ಜಕ್ಕೂರು ಏರೋಡ್ರೋಮ್ ಹತ್ತಿರ ಇದ್ದಾರೆ. ಅಲ್ಲೇ ಹೋಗಿ' ಅಂತ ಅಂದರು. ನಾನು ಜಕ್ಕೂರಿಗೆ ಹೋದೆವು. ಆದರೆ ಅಲ್ಲಿ ಅವರು ಎಲ್ಲೂ ಕಾಣಲಿಲ್ಲ. ಸಾಹೇಬರ ಸಹಾಯಕ ಸಾಹೇಬರಿಗೆ ಫೋನು ಮಾಡಿದರೆ ‘ಜೀವನದಲ್ಲಿ ತಲೆ ಎತ್ತಿ ಬದುಕುವುದು ಕಲೀರಿ ಸಾರ್' ಅಂತ ಫಿಲಾಸಫಿ ಮಾತಾಡಿದರು.

ಮೇಲೆ ನೋಡಿದರೆ ಆಕಾಶದಲ್ಲಿ ಒಂದು ಡಿರಿಜಿಬಲ್ ಏರ್ ಷಿಪ್ (dirigible air ship) ಹಾರಾಡುತ್ತಾ ಇದೆ. ‘ಮೇಲೆ ಬನ್ನಿ' ಅಂತ ಸಾಹೇಬರ ಮತ್ತೊಬ್ಬ ಸಹಾಯಕರು ಒಂದು ಹಗ್ಗ ಇಳಿ ಬಿಟ್ಟರು. ಒಬ್ಬೊಬ್ಬರೇ ಮೇಲೆ ಹತ್ತಿ ಹೋದೆವು.

ಒಳಗೆ ನಾನು ಕಂಡರಿಯದ ಇನ್ನೊಂದು ಜಗತ್ತೇ ಇದೆ. ಅಲ್ಲಿ ಎಲ್ಲರೀತಿಯ ಯಂತ್ರಗಳಿವೆ. ನೂರಾರು ಸುಪರ್ ಕಂಪ್ಯೂಟರ್ ಗಳು, ಅವನ್ನು ನಿಯಂತ್ರಿಸಲು ಇನ್ನೊಂದು ಸುಪರ್ ಕಂಪ್ಯೂಟರ್, ಧ್ವನಿ ನಿಯಂತ್ರಿತ ರೊಬೊಟ್ ಗಳು, ನೀರು ಬೇಕಿಲ್ಲದ ಟಾಯ್ಲೆಟ್, ಊಟವಾದ ತಕ್ಷಣ ಹಾಸಿಗೆಯಾಗಿಬಿಡುವ ಡೈನಿಂಗ್ ಟೇಬಲ್, ಎಲ್ಲ.

ಚಿಯರ್ ಫುಲ್ ಮೋದಿ
ಇನ್ನು ಅಲ್ಲಿ ಸಚಿವರ ಆಫೀಸೇ ಅಲ್ಲಿದೆ. ಅಲ್ಲಿಯೇ ಪ್ರಿನ್ಸಿಪಲ್ ಸೆಕ್ರೆಟರಿ, ಅಂಡರ್ ಸೆಕ್ರೆಟರಿ, ಓವರ್ ಸೆಕ್ರೆಟರಿ ಎಲ್ಲರೂ ಇದ್ದಾರೆ. ಹೊಸ ಹಾಲಿವುಡ್ ಸಿನಿಮಾಗಳಲ್ಲಿ ಅಮೇರಿಕ ಅಧ್ಯಕ್ಷರ ವಿಶೇಷ ವಿಮಾನ ಏರ್ ಫೋರ್ಸ್ ಒನ್ ಥರ ಎಲ್ಲ ಸೌಲಭ್ಯ ಇದೆ. ಸೆಕ್ಯೂರಿಟಿಯವರು, ಅಡುಗೆಯವರು, ಕಂಪ್ಯೂಟರ್ ಆಪರೇಟರುಗಳು, ಎಲ್ಲ. ಅಮೇರಿಕೆ ಅಧ್ಯಕ್ಷರಿಗೆ ಇರುವಂಥ ಬ್ಲಾಂಡ್ ಗರ್ಲ್ ಸೆಕ್ರೆಟರಿಗಳು ಕೂಡ ಇದ್ದರು. "ಈ ಲಲಿತೆಯರೆಲ್ಲ ಐಪಿಎಲ್ ನಲ್ಲಿದ್ದ ಚಿಯರ್ ಗರ್ಲ್ಸ್. ನಾನು ಹೋದ ಮೇಲೆ ಇವರನ್ನು ಕೇಳುವವರೇ ಇಲ್ಲವಾಗಿದೆ ಅಂತ ಮೋದಿ ಫೋನ್ ಮಾಡಿದ್ದ. ಪಾಪ ಅಂತ ನಾನು ಇವರನ್ನು ಕೆಲಸಕ್ಕೆ ಸೇರಿಸಿಕೊಂಡೆ. ಎಷ್ಟಾದರೂ ಮೋದಿ ಎನ್ನುವ ಹೆಸರೇ ನಮಗೆ ಪವಿತ್ರ ಅಲ್ಲವೇ" ಅಂದರು.

ಜಕ್ಕೂರಿನಲ್ಲಿಯೂ ಫಿಟ್ ಆದ ಜರ್ಮನಿ
‘ಎರಡನೇ ಮಹಾಯುದ್ಧದಲ್ಲಿ ಜರ್ಮನ್ ಸೈನ್ಯದವರು ಕಂಡುಹಿಡಿದಿದ್ದ ವಿಮಾನ ಇದು' ಅಂದರು ಸಚಿವರು. ಜರ್ಮನಿಯಿಂದ ಜಕ್ಕೂರಿಗೆ ಹೇಗೆ ಬಂತು ಅಂತ ಕೇಳಿದೆವು. ‘ಕಳೆದ ಬಾರಿ ನಮ್ಮ ಮೈನ್ ಲಾರಿ ಜರ್ಮನಿಗೆ ಹೋದಾಗ ನಮ್ಮ ಡ್ರೈವರ್ ಹಾಗೂ ಕ್ಲೀನರ್ ಅವರು ಇದನ್ನು ನೋಡಿ ತುಂಬ ಇಷ್ಟಪಟ್ಟರು. ನನಗೆ ಹೇಳದೇ ಕೇಳದೆ ಇದನ್ನು ಖರೀದಿ ಮಾಡಿದರು. ಕೊನೆಗೆ ಅದನ್ನು ಬಿಚ್ಚಿ ಅದರ ಸ್ಪೇರ್ ಪಾರ್ಟ್ ಗಳನ್ನು ಲಾರಿಯಲ್ಲಿ ಹೇರಿಕೊಂಡು ಬಂದೆವು. ಇಲ್ಲಿ ಬಂದು ಫಿಟ್ ಮಾಡಿದೆವು. ಹೇಗಿದೆ ಸಾರ್ ಎಂದು ಕೇಳಿದರು' ಎಂದರು. ಬಿನ್ನಹಕ್ಕೆ ಬಾಯಿ ಎಲ್ಲಿದೆ ಸ್ವಾಮಿ, ನಾವೇನು ಹೇಳಿಯೇವು? ಜೀವನವೆಲ್ಲಾ ಬಿಎಂಟೀಸಿ ಬಸ್ಸಿನಲ್ಲಿ ಅಡ್ಡಾಡಿದ್ದ ನಾನು ಡಿರಿಜಿಬಲ್ ಏರ್ ಷಿಪ್ ಬಗ್ಗೆ ಏನನ್ನಬಹುದು? ಎಲ್ಲಿಯ ಮಹಾವಿಷ್ಣು, ಎಲ್ಲಿಯ ನಾರದ ಮುನಿ?

ಅನರೀಚೆಬಲ್ ಡಿರಿಜಿಬಲ್
ನಾವು ಇಲ್ಲಿ ಯಾಕೆ ಇರುತ್ತೇವೆ ಎನ್ನುತ್ತೀರಾ? ಕೆಳಗಡೆ ಆ ಬೆಂಗಳೂರಿನಲ್ಲಿ ಬರೀ ಟ್ರಾಫಿಕ್ ಜಾಮ್ ಸಾರ್, ಕಾರ್ ತೊಗೊಂಡು ಹೊಗೋಕೇ ಆಗಲ್ಲ. ಅಲ್ಲೀಗ ದಿನಕ್ಕೆ ೨೦ ರಾಸ್ತಾ ರೋಕೊ, ಸಂಪು, ಹರತಾಲ್ ನಡೆಯುತ್ತೆ. ಅದರಲ್ಲಿ ಅರ್ಧ ನಮ್ಮ ಪಾರ್ಟಿಯವರವೇ ಇರುತ್ತೆ. ಹೀಗಾಗಿ ಯಾರಿಗೂ ಏನೂ ಅನ್ನಕ್ಕೆ ಬರಲ್ಲ. ಅದಕ್ಕೇ ಈ ವ್ಯವಸ್ಥೆ.

ಇನ್ನೊಂದು ಮಾತು ಅಂದರೆ, ಇಲ್ಲಿ ಆ ಕಾಂಗ್ರೆಸ್ ನವರ ಪಾದಯಾತ್ರೆಯ ಭಯವಿಲ್ಲ. ಮತದಾರರ ಗೊಂದಲವಿಲ್ಲ. ದಿನಾ ಬೆಳಿಗ್ಗೆ ಪೇಪರ್ ಓದಿ ಬೇಜಾರಾಗಬೇಕಿಲ್ಲ. ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳ ಬಗ್ಗೆ ದೂರು ಹೇಳಲು ಯಾರೋ ಫೋನ್ ಮಾಡುತ್ತಾರೆ ಎನ್ನುವ ಟೆನ್ಷನ್ ಇಲ್ಲ. ಬಂದರೂ ನಾನೇ ಹೆಣ್ಣು ಧ್ವನಿ ಮಾಡಿ ‘ದಿಸ್ ಪರಸನ್ ಈಸ್ ಅನರೀಚೆಬಲ್' ಅಂತ ಹೇಳಿಬಿಡುತ್ತೇನೆ ಅಂದರು.

ಸಿಲ್ವರ್ ಲೈನಿಂಗ್
ಬೆಳ್ಳಿಯ ತಾಟಿನಲ್ಲಿ ನಮಗೆಲ್ಲ ತಿಂಡಿ ನೀಡಲಾಯಿತು. ಯಾರಾದರೂ ಕದ್ದು ಬಿಟ್ಟಾರು ಎಂದು ಆ ಪ್ಲೇಟುಗಳ ಮೇಲೆ ‘ಶ್ರೀರಾಮುಲು ಅವರ ವಿಮಾನದಿಂದ ಕದ್ದು ತಂದಿದ್ದು' ಅಂತ ಕೊರೆಸಲಾಗಿತ್ತು. ಇರಲಿ ಅಂತ ಅವೆಲ್ಲಕ್ಕೂ ಬಿಗ್ ಬಜಾರ್ ನಲ್ಲಿ ತಗಲಿಸಿರುವಂತೆ ಒಂದು ಮೈಕ್ರೋಚಿಪ್ ಅಂಟಿಸಲಾಗಿತ್ತು.

ಧರ್ಮಸಂಗಮ ಹಾಗು ತಿಥಿ ಊಟ
"ಅಂದಹಾಗೆ ನಿಮ್ಮ ಕನಸಿನಲ್ಲಿ ಕರುಣಾಕರ ರೆಡ್ಡಿ ಅವರು ಬಂದಿದ್ದರಂತಲ್ಲ. ನೀವೆಷ್ಟು ಪುಣ್ಯವಂತರು? ಬನ್ನಿ, ಬನ್ನಿ" ಅಂತ ನನ್ನನ್ನು ಹತ್ತಿರ ಎಳೆದುಕೊಂಡರು.

"ಆದರೆ ನೀವು ಅದರ ಬಗ್ಗೆ ಬರೆದಿದ್ದು ಅಷ್ಟು ಸರಿ ಇರಲಿಲ್ಲ. ನಿಜ ಹೇಳಬೇಕೆಂದರೆ ಅವರು ರಾಮಾಯಣ ಮಹಾಭಾರತ ಕತೆ ಅಷ್ಟಾಗಿ ಹೇಳುವುದಿಲ್ಲ. ಅವರು ಭಗವದ್ಗೀತೆ, ಬೈಬಲ್ ಹಾಗು ಕುರಾನ್ ಬಗ್ಗೆ ತುಂಬ ಒಳ್ಳೆ ಪ್ರವಚನ ನೀಡುತ್ತಾರೆ. ನೀವು ಅದನ್ನು ಕೇಳಿ ಅದರ ಬಗ್ಗೆ ಬರೆಯಬೇಕು ಅಂತ ಆದೇಶ ಮಾಡಿದರು. ಹಾಗೇನಾದರೂ ಆಗಿ ಅವರು ಕನ್ ಫ್ಯೂಸ್ ಪ್ರವಚನ ಮಾಡಿ, ನಾನು ಅದನ್ನು ವರದಿ ಮಾಡಿದರೆ ಒಂದು ವರ್ಷದ ನಂತರ ಈ ಪತ್ರಕರ್ತನ ಪುಣ್ಯತಿಥಿ ಕಾರ್ಯಕ್ರಮ ಆದೀತು. ಅದರಲ್ಲಿ ಮತ್ತೆ ರೆಡ್ಡಿಗಾರು ಅದೇ ಪ್ರವಚನ ಮಾಡಿಯಾರು, ಅದನ್ನು ಮತ್ತೆ ನನ್ನಂತಹ ಕೆಲವು ದುರದೃಷ್ಟಕರ ಪತ್ರಕರ್ತರು ವರದಿ ಮಾಡಬೇಕಾದೀತು ಎಂದೆನ್ನಿಸಿ ಮೈ ಜುಮ್ಮೆನಿಸಿತು.

ಮೋಡದ ಮೇಲಿನ ಮಳೆ
ಮಾತಾಡುತ್ತ ಮಾತಾಡುತ್ತ ನಮ್ಮ ಮಾತು ಹವಾಮಾನದ ಕಡೆ ಹೊರಳಿತು. ‘ಕರ್ನಾಟಕದಲ್ಲಿ ಮಳೆ ಇದೆಯಾ' ಅಂತ ನಮ್ಮ ಟೀಮಿನವರೊಬ್ಬರು ಕೇಳಿದರು. ನಾವು ಮೋಡಗಳಿಗಿಂತ ಮೇಲೆ ಇರುತ್ತೇವೆ ನೋಡಿ, ನಮಗೆ ಗೊತ್ತಾಗೋದೇ ಇಲ್ಲ ಎಂದರು ನಾಯಕರು. ಅದಕ್ಕಿಂತ ಒಳ್ಳೆಯ ಉತ್ತರ ಇರಬಹುದು ಅಂತ ನನಗೆ ಅನ್ನಿಸಲಿಲ್ಲ.

ಪರಬೊಮ್ಮ ನಕ್ಕಾಗ
ಇನ್ನು ನಮ್ಮ ಸಿಎನ್ ಎನ್ ದಂಡನಾಯಕಿ ಒಂದು ಗಂಭೀರವಾದ ಪ್ರಶ್ನೆ ಕೇಳುತ್ತೇನೆ. ನಿಮಗೆ ಸರಿ ಎನ್ನಿಸಿದರೆ ಉತ್ತರ ಕೊಡಬಹುದು ಎಂದರು. ಸಚಿವರ ಪರಿಚಾರಿಕರೆಲ್ಲ ಗಂಭೀರವಾಗಿ ಕೂತರು. ಪೆನ್ನು ಪ್ಯಾಡು ಸರಿಮಾಡಿಕೊಂಡರು.

ಅಲ್ಲ ನೀವು ಈ ಬಲಪಂಥೀಯ ಪಕ್ಷದಲ್ಲಿ ಇದ್ದೀರಲ್ಲಾ, ನಿಮಗೆ ಈ ಸಿದ್ಧಾಂತಕ್ಕೆ ಅಂಟಿಕೊಂಡಿರುವುದು ಸರಿ ಎನ್ನಿಸುತ್ತದಾ ಅಂತ ಆಯಮ್ಮ ಕೇಳುವುದಕ್ಕೂ ಸಚಿವರು ಜೋರಾಗಿ ನಕ್ಕರು. ಐದು ನಿಮಷ ನಗುತ್ತಲೇ ಇದ್ದರು. ಅವರ ನಗು ಎಷ್ಟು ಜೋರಾಗಿತ್ತು ಎಂದರೆ ನೆಲದ ಮೇಲಿನ ಹುಲು ಮಾನವರಿಗೂ ಕೇಳಿರಬಹುದು. ಚಾಮರಾಜಪೇಟೆಯ ಹಳೇ ಮನೆಗಳಲ್ಲಿರುವ ಮುದುಕರಿಗೆ ಸಾಕ್ಷಾತ್ ಪರಬ್ರಹ್ಮನೇ ನಕ್ಕ ಅಂತ ಅನ್ನಿಸಿರಬಹುದು. ಬನಶಂಕರಿಯ ಗಲ್ಲಿಗಳಲ್ಲಿ ಮೂರು ಇಟ್ಟಿಗೆ ಇಟ್ಟು ಕ್ರಿಕೆಟ್ ಆಡುತ್ತಿರುವ ಪಡ್ಡೆ ಹೈಕಳುಗಳು ಗುಡುಗು ಸಿಡಿಲು ಜೋರಾಗಿದೆ. ಇನ್ನೇನು ಮಳೆ ಆರಂಭವಾಗಬಹುದು ಎನ್ನಿಸಿ ಒಳಗೆ ಓಡಿಹೋಗಿರಬಹುದು.

ಕೊನೆಗೆ ನಕ್ಕೂ ನಕ್ಕೂ ಅವರ ಕಣ್ಣಲ್ಲಿ ನೀರು ಬಂತು. ನೀರು ಕುಡಿದು ಮಾತು ಆರಂಭಿಸಿದರು. ಅಲ್ಲ ಮೇಡಂ, ಇದನ್ನು ನೀವು ಗಂಭೀರ ಪ್ರಶ್ನೆ ಎನ್ನುತ್ತೀರಾ. ಇದು ಪ್ರಶ್ನೆನೇ ಅಲ್ಲ. ಇನ್ನು ಗಾಂಭೀರ‍್ಯ ಎಲ್ಲಿಂದ ಬಂತು ಅಂತ ಅಂದರು. ಅವಳಿಗೆ ತಿಳಿಯಲಿಲ್ಲ. ನನ್ನ ಮುಖ ನೋಡಿದಳು. ನನಗೇ ತಿಳಿದಿಲ್ಲವಾದ್ದರಿಂದ ನಾನು ಅವಳಿಗೆ ಏನು ಹೇಳಲಿ? ಹೀಗಾಗಿ ನಾನು ನಾಯಕರ ಮುಖ ನೋಡಿದೆ.


ಅಮೃತಕ್ಕೇರುವ ಬಡವ
ನೋಡಿ ನೀವು ನಾವು ಬಲಪಂಥೀಯರು ಎನ್ನುತ್ತೀರಿ. ಇದರಲ್ಲಿ ಏನು ತಪ್ಪು? ನಮ್ಮ ಜನ ಏನು ಕೇಳುತ್ತಾರೆ? ಊಟ, ನೀರು, ವಾಸದ ಮನೆ, ಕ್ಲೀನ್ ಚರಂಡಿ, ಕರೆಂಟು ಇತ್ಯಾದಿ. ಇವೆಲ್ಲ ಲೌಕಿಕ ವಿಷಯಗಳು. ಇವೆಲ್ಲಾ ಯಾರಿಗೆ ಬೇಕು ಹೇಳಿ? ದಾಸರು ಹೇಳಿಲ್ಲವೇ, ಇಲ್ಲಿರುವುದು ಸುಮ್ಮನೇ, ಅಲ್ಲಿರುವುದು ನಮ್ಮನೆ ಅಂತ, ಹೀಗಾಗಿ ನಾವೆಲ್ಲ ಜನರಿಗೆ ಈ ಲೌಕಿಕ ಬದುಕಿನ ಸಂಕಷ್ಟಗಳಿಂದ ಪಾರಾಗುವ ಒಂದು ಉತ್ತಮ ದಾರಿ ಸೂಚಿಸುತ್ತೇವೆ. ಅದೇನೆಂದರೆ, ಅಯೋಧ್ಯೆಯಿಂದ ಹಿಡಿದು ರಾಮ ಸೇತುವರೆಗೂ ರಸ್ತೆ ಬದಿಯಲ್ಲೆಲ್ಲ ಒಂದೊಂದು ದೇವಸ್ಥಾನ ಕಟ್ಟಿಸುವುದು. ಇದು ಅವರ ಮೋಕ್ಷದ ಮಾರ್ಗ ಅಲ್ಲವೇ? ಅವರಿಗೆ ಇನ್ನೂ ಹತ್ತಿರದ ಮಾರ್ಗ ಬೇಕು ಎಂದಾದರೆ ಸರಕಾರಿ ಆಸ್ಪತ್ರೆ ಕಟ್ಟಿಸುವುದು. ಇದೂ ಬೇಡವೆಂದರೆ ಮಲ್ಟಿ ಫ್ಲೋರೀಡ್ ಸ್ಮಶಾನ ಕಟ್ಟಿಸುವುದು. ಇದು ಮೇಡಂ ನಿಜವಾದ ಬಲ ಪಂಥ. ನಿಮಗೆ ಗೊತ್ತಿಲ್ಲ, ಅಂದರು. ಮತ್ತೆ ನಕ್ಕರು. ನನಗೆ ಗೊತ್ತಿರಲಾರದ್ದು ಬಹಳ ಇದೆ ಎಂದು ಅವಳಿಗೆ ಅರ್ಥವಾಗುತ್ತಿದ್ದಂತೆಯೇ ಅವಳೂ ನಕ್ಕಳು.

ಸ್ಪೆಷಲ್ ಪೊಲಿಟಿಕಲ್ ಝೋನ್
ನಮ್ಮ ವೃತ್ತಿ ಆಂಧ್ರದಲ್ಲಾದರೆ ನಮ್ಮ ಪ್ರವೃತ್ತಿ ಕರ್ನಾಟಕದಲ್ಲಿ. ಇಲ್ಲಿ ನಾವು ಬಲಪಂಥೀಯರು ಇರಬಹುದು. ಆದರೆ ಅಲ್ಲಿ? ಅಲ್ಲಿ ನಾವು ಯಾರು, ಏನು ಎನ್ನುವುದನ್ನು ಚಂದ್ರಬಾಬು ನಾಯ್ಡು ಅವರನ್ನು ಕೇಳಿ. ಅಲ್ಲರೀ ನಾವು ನಿಜವಾದ ಬಲಪಂಥೀಯರಾಗಿದ್ದರೆ ನಮ್ಮ ಗಣಿ ಮಣ್ಣನ್ನು ನಾವು ಪಾಕಿಸ್ತಾನಕ್ಕೆ ಕಳಿಸುತ್ತಿದ್ದೆವಾ? ಹೋಗಲಿ ನಾವು ಈ ಸಿದ್ಧಾಂತದವರು ಅಂತ ಅಲ್ಲಿನವರಿಗೆ ಖಾತ್ರಿಯಾಗಿದ್ದರೆ ಅವರು ಅದನ್ನು ಖರೀದಿ ಮಾಡುತ್ತಿದ್ದರಾ? ಅಲ್ಲರೀ ನಮ್ಮ ವಾಜಪೇಯಿ ಲಾಹೋರಿಗೆ ಬರೀ ಬಸ್ ಬಿಟ್ಟರು. ನಾವು ಮನಸು ಮಾಡಿದರೆ ಬಳ್ಳಾರಿಯಿಂದ ಡೈರೆಕ್ಟ್ ಒಂದು ಗೂಡ್ಸ್ ರೈಲೇ ಬಿಟ್ಟು ಬಿಡುತ್ತೇವೆ.

ಪಂಟರುಗಳ ಪಂಥ
ನಿಜ ಹೇಳಬೇಕೆಂದರೆ, ನಮಗೆ ಬಲ, ಎಡ ಅಂತೇನೂ ಇಲ್ಲ. ಇದೆಲ್ಲ ಒಂದು ಪಂಥ ಅಷ್ಟೇ. ನಮ್ಮ ಜೀವನವೇ ಒಂದು ಪಂಥ. ನೀವೂ ಒಂದು ಫೈನಾನ್ಸ್ ಕಂಪನಿ ನಡೆಸಿ ನೋಡೋಣ ಅಂತ ನಮ್ಮ ಚೇರ್ಮನ್ ಜನಾರ್ಧನ ರೆಡ್ಡಿ ಅವರಿಗೆ ಯಾರೋ ಪಂಥ ಒಡ್ಡಿದರು. ಅವರು ಎನ್ನೋಬಲ್ ಇಂಡಿಯಾ ಶುರು ಮಾಡಿದರು. ನೀವೂ ಗಣಿ ಲೈಸನ್ಸ್ ತೊಗೊಳ್ಳಿ ನೋಡೋಣ ಅಂತ ಯಾರೋ ನಮಗೆ ಪಂಥ ಹಾಕಿದರು, ನಾವು ತೊಗೊಂಡ್ವಿ. ನಮ್ ಥರಾ ರಾಜಕೀಯ ಮಾಡಿ ನೋಡೋಣ ಅಂತ ದಿವಾಕರ್ ಬಾಬು ಪಂಥ ಹಾಕಿದರು, ನಾವು ಅವರಿಗಿಂತ ಚೆನ್ನಾಗಿ ಮಾಡಿ ತೋರಿಸಿದೆವು.

ಇನ್ನು ಇಷ್ಟು ದಿನ ಬರೀ ಬಲಗಡೆ ರಾಜಕೀಯ ಮಾಡಿದಿರಿ, ಈ ಕಡೆ ಬನ್ನಿ ನೋಡೋಣ ಅಂತ ಯಾರಾದರೂ ಪಂಥ ಹಾಕಿದರೆ ನಾವು ಆ ಕಡೆ ಹೋಗ್ತೇವೆ. ಎಡಗೈಗೂ ಬಲಗೈಗೂ ಎಷ್ಟು ದೂರ ಹೇಳಿ, ಕೊನೆಗೂ ಡಿಸೈಡ್ ಮಾಡೋದು ತಲೇನೇ ತಾನೆ?

ನಮಗೆ ಸಿದ್ಧಾಂತವೇ ಇಲ್ಲ. ನಮಗಿರುವುದೆಲ್ಲ ಒಂದೇ ಸಿದ್ಧಾಂತ. ಜನರಿಗೆ ಒಳ್ಳೆಯದಾಗಬೇಕೂಂತ. ಆ ಜನ ನಮ್ಮವರಾಗಿದ್ದಷ್ಟೂ ಒಳ್ಳೆಯದು. ಇದೆಲ್ಲ ಸಾಧ್ಯವಾಗಲು ಮೊದಲು ನಾವು ಆರಾಮ ಇರಬೇಡವೇ? ಹಾಹಾಹಾ ಅಂತ ಇಂಟರನೆಟ್ ಸ್ಮೈಲಿಯ ಥರ ನಕ್ಕರು.

ನಮ್ಮಾಕೆಗೆ ಇದು ಪೂರ್ತಿ ಕನ್ವಿನ್ಸ್ ಆಗಲಿಲ್ಲ. ಅವಳು ಸ್ವಲ್ಪ ಬಿಡಿಸಿ ಹೇಳಿ ಅಂತ ಅಂದಳು. ಅವರು ಹೇಳಲು ರೆಡಿಯಾದರು. ನಾನು ಓಡಲು ರೆಡಿಯಾದೆ.

ಸಿದ್ಧಾಂತ ಸಂಗಮ ಅಥವಾ ಸಂಪೂರ್ಣ ಸಂಪಾದನೆ
ಹೇಗೂ ಶ್ರಾವಣ ಮಾಸದಲ್ಲಿ ಬಂದಿದ್ದೀರಿ. ನಿಮಗೊಂದು ಸಣ್ಣ ಪ್ರವಚನ ಕೇಳಿಸುತ್ತೇನೆ ಅಂದರು. ಶಾಲು ಸರಿಮಾಡಿಕೊಂಡು ಕುರ್ಚಿಯಲ್ಲಿ ಸರಿಯಾಗಿ ಕುಳಿತುಕೊಂಡರು. ರೆಡ್ಡಿ ಅವರ ರಾಂಭಾರತ ಕೇಳಿದ್ದ ನಾನು ಇದನ್ನೆಲ್ಲಿ ಕೇಳಲಿ ಅಂತ ಹೆದರಿ ಓಡಿ ಹೋಗಲು ಜಾಗ ಹುಡುಕಿದೆ. ಆದರೆ ಅಲ್ಲೆಲ್ಲಿದೆ ಜಾಗ? ಮೋಡಗಳ ಮೇಲೇನು ಫುಟ್ ಪಾತ್ ಇದೆಯಾ? ಸುಮ್ಮನೆ ಮೂಲೆಯಲ್ಲಿ ಕೂತೆ.

ರಂಗ ಪಂಚಮಿ
ನೋಡಿ ಮೇಡಂ. ನಾವು ಕರ್ನಾಟಕದಲ್ಲಿದ್ದೇವೆ, ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಈ ಪಕ್ಷದಲ್ಲಿ ಇದ್ದೇವೆ. ನಾವು ಕೇರಳ, ಪಶ್ಚಿಮ ಬಂಗಾಳ ಅಥವಾ ಮಣಿಪುರದಲ್ಲಿ ಇದ್ದಿದ್ದರೆ ಅಧಿಕಾರ ಎಲ್ಲಿ ಇದೆಯೋ ಅಲ್ಲಿ ಇರುತ್ತಿದ್ದೆವು. ಸಿಂಪಲ್. ನಮ್ಮ ಕೇಸರಿ ಪೈಜಾಮ್ ಜುಬ್ಬಾಗಳನ್ನು ಒಂದು ಸಾರಿ ಹೋಳಿ ಹುಣ್ಣಿಮೆಗೆ ಹಾಕಿಕೊಂಡರೆ ಅವು ಕೆಂಪಾಗುತ್ತವೆ. ಇಲ್ಲಾ ವಿಂಡ್ ಚೀಟರ್ ಗಳ ಥರ ಡಬಲ್ ಕಲರ್ ಇರುವ ಜಾಕೆಟ್ ಹೊಲಿಸುವುದು. ಸಮಯಕ್ಕೆ ತಕ್ಕಂತೆ ಹಾಕಿಕೊಳ್ಳುವುದು. ಆ ಹೊತ್ತಿಗೆ ಯಾವ ಬಣ್ಣದ ಜಾಕೇಟು ಹಾಕಿಕೊಳ್ಳುತ್ತೇವೊ ಅದಕ್ಕೆ ಸಂಬಂಧ ಪಟ್ಟ ಭಾಷಣ ಮಾಡುವುದು. ಅದೇನು ಕಷ್ಟವೇ?

ಕಾರ್ಮಿಕ ಕಲ್ಯಾಣ
ಕಾರ್ಮಿಕರಿಗೆ ಕೆಲಸ ಕೊಡಬೇಕು ಅಂತ ಯಾರಾದರೂ ಗಲಾಟೆ ಮಾಡಿದರೆ, ನಮ್ಮ ಜೆಸಿಬಿಗಳನ್ನೆಲ್ಲ ತೆಗೆದು ಕೂಲಿಯವರಿಂದ ಭೂಮಿ ಅಗೆಸುತ್ತಿದ್ದೆವು. ಅಷ್ಟೇ. ನಾವು ಈಗಾಗಲೇ ವರ್ಷಕ್ಕೆ ಸಾವಿರಾರು ಉಚಿತ ಮದುವೆ ಮಾಡಿಸುತ್ತೇವೆ. ಅಲ್ಲಿ ಕಾರ್ಮಿಕರ ಮದುವೆ ಮಾಡಿಸುತ್ತಿದ್ದೆವು. ಅದೇ ಕಾರ್ಮಿಕರ ಕಲ್ಯಾಣ ಅಲ್ಲವೇ, ಅಂದರು. ನನಗೂ ಹೌದಲ್ಲವೇ ಎನ್ನಿಸತೊಡಗಿತ್ತು.

ಸಿದ್ಧಾಂತಕ್ಕೂ ಪೇಟೆಂಟೇ
ಕಾರ್ಮಿಕರು ದೊರೆಗಳಾಗುವುದು ಕೆಲ ಎಡಪಂಥೀಯ ಚಿಂತಕರ ಕನಸು. ಅದೇನು ಬರೀ ಕನಸೇ? ಸ್ವಾಮಿ, ನಾವೇನು ಟಾಟಾ ಬಿರ್ಲಾಗಳ ಮಕ್ಕಳಾ, ಹತ್ತು ವರ್ಷಗಳ ಹಿಂದೆ ನಾವು ಸೈಕಲ್ ಮೇಲೆ ಓಡಾಡುತ್ತಿದ್ದೆವು. ಬೇರೆಯವರ ಕೈಯಲ್ಲಿ ಕೆಲಸ ಮಾಡುತ್ತಿದ್ದೆವು. ಈಗ ನಾವೇ ಬೇರೆಯವರಿಗೆ ಕೆಲಸ ಕೊಡುವಂತೆ ಆಗಿಲ್ಲವೇ? ಇದು ಕಾರ್ಮಿಕರ ಸಬಲೀಕರಣ ಅಲ್ಲವೇ? ಇದಕ್ಕಾಗಿ ರಾಜ್ಯದ ಎಲ್ಲ ಕಾರ್ಮಿಕರಿಗೆ ಗಣಿ ಪರವಾನಗಿ ನೀಡಿಬಿಟ್ಟರೆ ಆಯಿತು. ಅಲ್ಲಿ ಇಲ್ಲಿ ಸ್ವಲ್ಪ ಕಾಡು ಕಡಿಮೆ ಆದರೆ ಏನಾಗುವುದಿದೆ? ನಾಡು ಮುಖ್ಯವೇ ಹೊರತು ಕಾಡಲ್ಲ. ಕಾರ್ಮಿಕರು ಮುಖ್ಯವೇ ಹೊರತು ಕಂಪನಿಯಲ್ಲ. ಆಡಳಿತ ಮುಖ್ಯವೇ ಹೊರತು ಚುನಾವಣೆಯಲ್ಲ. ಪಕ್ಷ ಮುಖ್ಯವೇ ಹೊರತು ಸರಕಾರವಲ್ಲ. ಕಾರ್ಮೇಡ್ ಗಳು ಮುಖ್ಯ ಹೊರತು ಮತದಾರರಲ್ಲ. ಪಕ್ಷದ ಕಚೇರಿ ಮುಖ್ಯ ಹೊರತು ವಿಧಾನಸೌಧವಲ್ಲ. ಇದೆಲ್ಲ ನಮಗೂ ಗೊತ್ತಿದೆ. ಈ ಜ್ಞಾನವೇನು ಬರೀ ಕಾರ್ಮೇಡ್ ಗಳ ಸ್ವತ್ತಾ?

ಕಾರ್ಲ್ ಎಷ್ಟು ಮಾರ್ಕ್ಸ್ ತೊಗೊಂಡಿದ್ದ?
ನೋಡಿ, ಕಾರ್ಲ್ ಮಾರ್ಕ್ಸ್ ಏನು ಹೇಳಿದ್ದಾರೆ, ‘ವರ್ಕರ‍್ಸ್ ಆಫ್ ದಿ ವರ್ಲ್ಡ್ ಯುನೈಟ್' ಅಂತ. ನಾವು ಅದನ್ನು ಸ್ವಲ್ಪ ಬದಲಾಯಿಸಿ ‘ಪಾರ್ಟಿ ವರ್ಕರ‍್ಸ್ ಆಫ್ ದಿ ವರ್ಲ್ಡ್ ಯುನೈಟ್' ಅಂತ ಮಾಡಿದ್ದೇವೆ. ಕೇವಲ ಒಂದು ಶಬ್ದ ಕಮ್ಮಿ. ನಮಗೆ ಎಷ್ಟು ಮಾರ್ಕ್ಸ್ ಬಂದಂತಾಯಿತು? ನಮಗಿಂತ ಕಮ್ಮಿ ಮಾರ್ಕ್ಸ್ ತೊಗೊಂಡವರೆಷ್ಟು ಜನ ಮಾರ್ಕ್ಸ್ ಅವರ ಪಕ್ಷದಲ್ಲಿ ಇದ್ದಾರೆ ಅಂತ ತೋರಿಸಲಾ ನಾನು?

ಬದಲಾವಣೆಯೇ ಬಳ್ಳಾರಿಯ ನಿಯಮ
ಮಾರ್ಕ್ಸ್ ಅವರು ಇನ್ನೂ ಒಂದು ಮಾತು ಏನು ಹೇಳಿದ್ದಾರೆ? ‘ತತ್ವಜ್ಞಾನಿಗಳೆಲ್ಲ ಈ ಜಗತ್ತು ನಡೆಯುವುದು ಹೇಗೆ ಎಂದು ವಿವರಿಸಿ ಹೇಳಿದ್ದಾರೆ. ಆದರೆ ನಮಗೆ ಈಗ ಬೇಕಾಗಿರುವುದು ಅದನ್ನು ಬದಲಾಯಿಸುವುದು ಹೇಗೆ ಎನ್ನುವ ಬಗೆ'. ನಾವು ಅವರು ಹೇಳಿದ್ದನ್ನು ನಾವು ಚಾಚೂತಪ್ಪದೇ ಪಾಲಿಸುತ್ತಿದ್ದೇವೆ.

ನಮ್ಮನ್ನು ನೋಡಿ, ನಾವು ಎಲ್ಲವನ್ನೂ ಬದಲಾಯಿಸುತ್ತಿಲ್ಲವಾ? ಎಲೆಕ್ಷನ್ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಪಕ್ಷ ನಡೆಸುವ ವ್ಯವಸ್ಥೆ, ಪ್ರಜೆ-ಪ್ರಭು ಸಂಬಂಧ, ಸಮ್ಮೇಳನ ನಡೆಸುವುದು, ಇವೆಲ್ಲವನ್ನೂ ನಾವು ಬೇರೆ ಯಾರೂ ಕಲ್ಪನೆ ಮಾಡಲಾರದಷ್ಟು ಬದಲಾಯಿಸಿದ್ದೇವೆ. ಈ ದೃಷ್ಟಿಯಿಂದ ನಾವು ಈಗಲೇ ಮಾರ್ಕ್ಸಿಸ್ಟುಗಳು. ನಾವು ಪಕ್ಷ ಬದಲಿಸುವುದೇ ಬೇಕಾಗಿಲ್ಲ. ಇದನ್ನು ಯಾರು ಹೇಳುತ್ತಾರೆ? ಪೇಪರ್ ನವರು, ಟೀವಿಯವರು, ಬರೀ ಗಣಿ, ಮಣ್ಣು ಧೂಳು ಅಂತ ಏನೇನೋ ಬರೆಯುತ್ತಾರೆ. ಇದನ್ನೆಲ್ಲಾ ಯಾಕೆ ಬರೆಯೋದಿಲ್ಲ? ಅಂತ ಒಮ್ಮಿಂದೊಮ್ಮೆಲೇ ಮ್ಲಾನವದನರಾಗಿ ಚಿಂತಾಕ್ರಾಂತರಾದರು.

ಒಂದು ಭಾಷೆ, ಎರಡು ಭಾವ
ಇನ್ನು ಬಲ ಎಡ, ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಿ ಅಂತ ನಮ್ಮ ತಾಯಿ ಸಾಹೇಬರು ಅಪ್ಪಣೆ ಕೊಡಿಸಿದರೆ, ನಾವು ಅದಕ್ಕೂ ರೆಡಿ. ಒಂದು ಸಾರಿ ಜರ್ಮನ್ ಕಲಿತುಬಿಟ್ಟರೆ ಸಾಕು, ಬಲ ಎಡ ಎರಡೂ ಸರಿಯಾಗಿ ಅರ್ಥವಾಗುತ್ತವೆ. ಕಾರ್ಲ್ ಮಾರ್ಕ್ಸ್‌ನ ದಾಸ್ ಕಾಪಿಟಲ್, ಹಿಟ್ಲರ್ ನ ಮೈನ್ ಕೆಂಫ್ ಎರಡೂ ಅದೇ ಭಾಷೆಯಲ್ಲಿ ಇಲ್ಲವೇ?

ಇಂದು ರಾತ್ರಿ ಯಾವ ಶೋ?
ಯಾವುದೇ ಸಿದ್ಧಾಂತವನ್ನು ನಾವು ಒಪ್ಪದೇ ಇದ್ದರೂ ಎರಡನ್ನೂ ಒಪ್ಪಿದಂತೆ ನಟಿಸುವುದು. ಅದೇನು ತಪ್ಪೇ? ನಮ್ಮ ರಾಜ್ಯದ ಹೆಸರೇ ಕರ್ ನಾಟಕ್ ಅಲ್ಲವೇ?

ಗಡ್ಡ ಬಿಟ್ಟವನಿಗೆ ಮಿಠಾಯಿ
ಯಾರಾದರೂ ಕಾಮ್ರೇಡ್ ಶಾಂತಿನಿಕೇತನದಲ್ಲಿ ಓದಿ ರವೀಂದ್ರನಾಥ ಟಾಗೋರ್ ಥರ ಗಡ್ಡ ಬಿಟ್ಟುಕೊಂಡು ನಮಗೆ ಬುದ್ಧಿ ಹೇಳಲು ಬಂದರು ಎಂದುಕೊಳ್ಳಿ. ಅವರನ್ನು ಚಾಮರಾಜಪೇಟೆ ಮೈದಾನದ ಬೌದ್ಧಿಕಕ್ಕೆ ಕರೆದುಕೊಂಡು ಹೋಗುವುದು. ಅಲ್ಲಿ ಎಲ್ಲರ ಭಾಷಣದ ನಂತರ ಅವರ ಭಾಷಣನ ಇಟ್ಟುಕೊಳ್ಳಬೇಕು. ಅದಾದ ನಂತರ ನಾವಾದರೂ ಬದಲಾಗಬೇಕು, ಅವರಾದರೂ ಬದಲಾಗಬೇಕು. ಸಣ್ಣ ವಿಷಯ.

ಅಣು -ರೇಣು ತೃಣ ಏನು ಕಷ್ಟ?
ಅಮೇರಿಕದ ಜತೆಗಿನ ಅಣು ಒಪ್ಪಂದ ವಿರೋಧ ಮಾಡಬೇಕೆ? ಮಾಡೋಣ. ಅದರಿಂದ ನಮ್ಮ ಮೈನ್ಸ್ ಬಿಸಿನೆಸ್ ಗೆ ಯಾವ ಸಂಬಂಧ ಇಲ್ಲವಷ್ಟೇ. ಹಾಗಾದರೆ ನಮಗೇನು ಸಂಬಂಧ? ಇನ್ನು ಕಬ್ಬಿಣದ ಅದಿರು ಹುಡುಕುತ್ತ ಹೋದಾಗ ಯುರೇನಿಯಂ ಸಿಕ್ಕಿತು ಅಂದುಕೊಳ್ಳಿ. ಆಗ ಅಣು ಒಪ್ಪಂದವನ್ನು ಒಪ್ಪಬೇಕು ಅಂತ ನಮ್ಮ ನಾಯಕರು ನಿರ್ಧಾರ ಮಾಡಿದರು ಎಂದುಕೊಳ್ಳಿ. ಅದನ್ನೂ ಮಾಡೋಣ. ನ್ಯೂಕ್ಲಿಯರ್ ಸಪ್ಲೆಯರ್ ಲಿಸ್ಟ್ ನಲ್ಲಿ ಬಳ್ಳಾರಿಯ ನಮ್ಮಂಥ ಸಣ್ಣ ಕೈಗಾರಿಕೋದ್ಯಮಿಗಳನ್ನು ಸೇರಿಸಬೇಕು ಅಂತ ಅದರಲ್ಲಿ ಕಂಡಿಷನ್ ಹಾಕಿದರಾಯಿತು. ಇಷ್ಟಾಗಿಯೂ ಅಣು-ಗಣಿ ಒಂದೇ ಅಕ್ಷರ ವ್ಯತ್ಯಾಸ ಸ್ವಾಮಿ.

ಕಿಮ್ ಜಾಂಗ್ ಇಲ್, ಇಲ್ ಯಾಕ್ ಇಲ್?
ಇನ್ನು ಖಾಸಗಿ ಆಸ್ತಿ, ಉದ್ದಿಮೆ, ಕಾರ್ಖಾನೆಗಳನ್ನೆಲ್ಲ ರಾಷ್ಟ್ರೀಕರಿಸಬೇಕು ಅಂತ ಯಾರಾದರೂ ಪುಕಾರು ತೆಗೆದರು ಅಂದುಕೊಳ್ಳಿ. ಮಾಡಿದರಾಯಿತು. ಆದರೆ ಸದಾ ಸರಕಾರದಲ್ಲಿ ನಾವೇ ಇರುವಂತೆ ನೋಡಿಕೊಂಡರಾಯಿತು. ಈಗ ಉತ್ತರ ಕೋರಿಯಾದ ಕಿಮ್ ಜಾಂಗ್ ಇಲ್ ಇಲ್ಲವೇ? ರಾಷ್ಟ್ರವೇ ಅವರದಿದ್ದಾಗ, ರಾಷ್ಟ್ರೀಕರಣದಿಂದೇನು ಭಯ?

ಡರೋಜಿ ಕರಡಿ ‘ಪರಂ'ಧಾಮ
ಇನ್ನು ಗೋಹತ್ಯೆ ನಿಷೇಧ ಕಾಯಿದೆ. ಜಾರಿಗೆ ಬರಬಹುದು. ಬರಲಿ. ಹಾಗೇನಾದರೂ ಆದರೆ, ನಾವು ಹುಲಿ, ಸಿಂಹ, ಕರಡಿ ತಿನ್ನಬಹುದು. ನಾವೆಲ್ಲ ಕಾಡನ್ನು ಅರ್ಥಪೂರ್ಣವಾಗಿ ಬಳಸಿಕೊಂಡಮೇಲೆ ಅಲ್ಲಿ ಉಳಿದಿದ್ದೇನು? ಕಾಡು ಪ್ರಾಣಿಗಳೆಲ್ಲ ಸಾಕು ಪ್ರಾಣಿಗಳಾಗುವುದಿಲ್ಲವೇ? ಅರಣ್ಯವೇ ಇಲ್ಲದಿದ್ದಾಗ ಅವನ್ನೆಲ್ಲ ಕೊಟ್ಟಿಗೆಗೆ ಕಟ್ಟುವುದೇ ತಾನೆ? ಕಾಡಿನಲ್ಲಿರುವ ಹುಲಿ ಕೊಲ್ಲಬಾರದು ಅಂತ ನಿಯಮ ಇದೆ. ಕೊಟ್ಟಿಗೆಯಲ್ಲಿರುವ ಹುಲಿ ತಿನ್ನಬಾರದು ಅಂತೇನೂ ಇಲ್ಲವಲ್ಲಾ?

ಎಡವಿದ ಬಲ
ಇನ್ನು ಪಶ್ಚಿಮ ಬಂಗಾಲದಂತೆ ಶಾಸನ ಸಭೆಗಿಂತ ಪಕ್ಷದ ವಿಲೇಜ್ ಕಮಿಟಿಯೇ ಹೆಚ್ಚು ಪಾವರ್ ಫುಲ್ ಆಗಬೇಕು. ಈಗ ಬಳ್ಳಾರಿಯಲ್ಲಿ ನಡೆಯುತ್ತಿರುವುದೇನು? ನಮ್ಮಲ್ಲಿಗೆ ಬಂದು ಯಾವ ಅಧಿಕಾರಿಯನ್ನಾದರೂ ಕೇಳಿ. ಅವರಿಗೆ ಕಾಲಕಾಲಕ್ಕೆ ಸಲಹೆ- ನಿರ್ದೇಶನ, ಕೆಟ್ಟ ಕಾಲಕ್ಕೆ ರಕ್ಷಣೆ ಕೊಡುವವರು ಯಾರು ಅಂತ. ವಿಧಾನಸೌಧದಲ್ಲಿರುವ ಹಿರಿಯ ಅಧಿಕಾರಿಗಳಲ್ಲ. ಪಕ್ಷದ ಕಚೇರಿಯಲ್ಲಿರುವ ಹಿರಿ-ಕಿರಿಯ ನಾಯಕರು. ಬಂಗಾಲದಲ್ಲಿರುವುದೂ ಇದೇ ವ್ಯವಸ್ಥೆ ತಾನೆ? ಇದಕ್ಕಿಂತ ಬಲವಾದ ಎಡಪಂಥೀಯ ವಾದ ಇರಬಹುದೆ?

ಬಲವಿಲ್ಲದ ಎಡ
ಇಷ್ಟಾಗಿ ಕೆಲವು ಕಾರ್ಯಕ್ರಮಗಳನ್ನು ಜೊತೆ ಜೊತೆಯಾಗಿಯೇ ತೆಗೆದುಕೊಳ್ಳಬಹುದು. ಉದಾಹರಣೆಗೆ ನಾಗಪುರದಲ್ಲಿ ಐಟಿಸಿ, ಓಟಿಸಿ ಕ್ಯಾಂಪ್ ಗಳಾದ ಮರುದಿನವೇ ಕೇಡರ್ ಕ್ಯಾಂಪ್ ಮಾಡಬಹುದು. ಅದೇ ಟೆಂಟು, ಅದೇ ಲಾಠಿ, ಅದೇ ಅಡುಗೆಯವರು, ಅದೇ ಮೈಕಿನವರು. ಮಾತು ಬೇರೆ, ಮಾತಾಡುವವರು ಬೇರೆ ಅಷ್ಟೇ. ನಮಗೇನೂ ಅಂಥ ವ್ಯತ್ಯಾಸವಾಗುವುದಿಲ್ಲ.

ಎರಡಕ್ಷರದಲ್ಲಿ ಅದೆಂಥ ಬಲ?
ಸರಕಾರ ಬಲವಿದ್ದರೇನು, ಎಡವಿದ್ದರೇನು? ಉದ್ದಿಮೆಗಳಿಗೆ ಜಮೀನು ಬೇಕು. ಬೇಡ ಅನ್ನಲು ರೈತರು ಯಾರು? ಅಲ್ಲಿನ ರೈತರು ಸಿಂಗೂರಿನಲ್ಲಿ ಗಲಾಟೆ ಮಾಡಿದರು. ನಮ್ಮವರು ಚಾಗನೂರಿನಲ್ಲಿ ಗಲಾಟೆ ಮಾಡಿದರು. ಮತ್ತೆ ಬರೀ ಎರಡಕ್ಷರದ ವ್ಯತ್ಯಾಸ. ಅದಕ್ಕೆ ಉತ್ತರವಾಗಿ ಮಾತ್ರ ಅವರು ಅಲ್ಲೇನು ಮಾಡಿದರೋ ಅದನ್ನೇ ನಾವು ಇಲ್ಲಿಯೂ ಮಾಡಿದೆವು. ಏನೂ ವ್ಯತ್ಯಾಸವಿಲ್ಲ.

ಏಟು ಹಾಗು ಓಟು
ಕಾರ್ಮಿಕರ ಸರಕಾರ ಕಾರ್ಮಿಕರ ಮಕ್ಕಳಿಗೆ ಕೇವಲ ಪ್ರಾಥಮಿಕ ಶಿಕ್ಷಣ ಒದಗಿಸಬೇಕು ಅಂತ ಯಾರಾದರೂ ಯುನಿವರ್ಸಿಟಿ ಬುದ್ಧಿವಂತರು ಕೂಗು ಹಾಕಿದರು ಅಂದುಕೊಳ್ಳಿ. ನಮ್ಮ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳನ್ನು ಬಂದ್ ಮಾಡಿ ಅಲ್ಲಿ ಒಂದನೇ ಈಯತ್ತೆ ತೆರೆಯಬೇಕು. ನಮ್ಮ ಹುಡುಗರನ್ನು ಹೆಚ್ಚಿಣ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಕಳಿಸಬೇಕು. ಒಂದೆರಡು ಏಟು ತಿನ್ನಬೇಕಾಗಬಹುದು. ತಿನ್ನಲಿ. ಪ್ರೈಮರಿ ಶಾಲೆಯಲ್ಲಿ ತಿನ್ನಬಹುದಾದಲ್ಲಿ ಇಂಜಿನಿಯರಿಂಗ್ ಓದುವಾಗ ತಿನ್ನಬಾರದೇ? ಅಷ್ಟಾಗಿಯೂ ಏಟು ತಿನ್ನುವುದನ್ನು ಕಲಿತ ಹುಡುಗರು ನಮಗೆ ರಾಜಕೀಯ ಹೋರಾಟಗಳಿಗೆ ಬೇಕು. ಕಾಮ್ರೇಡ್ ಗಳು ತಯಾರಾಗುವುದು ಎಂದರೆ ಏನು ಸುಲಭವೇ?

ಗರೀಬೋಂಕೊ ಹಟಾವೋ
ಇನ್ನು ರೇಷನ್ ವ್ಯವಸ್ಥೆಯನ್ನು ಕೇವಲ ಬಡವರಿಗಲ್ಲದೇ ಎಲ್ಲರಿಗೂ ವಿಸ್ತರಿಸಬೇಕು ಅನ್ನುವುದು ಎಡಪಂಥೀಯರ ಬಲವಾದ ವಾದ. ಈಗ ನಾವು ಆ ದಿಕ್ಕಿನಲ್ಲಿಯೇ ಹೋಗುತ್ತಿದ್ದೇವೆ. ನಮ್ಮ ಸರಕಾರ ನಡೆಯುತ್ತಿರುವ ರೀತಿ ನೋಡಿದರೆ ಇನ್ನು ಮೂರು ವರ್ಷಗಳಲ್ಲಿ ಅಬೊವ್ ಪಾವರ್ಟಿ ಲೈನ್ ಅಂತ ಯಾರೂ ಉಳಿಯುವುದಿಲ್ಲ. ಎಲ್ಲರೂ ಬಿಪಿಎಲ್ ಆಗಿ ಬಿಡ್ತಾರೆ. ಆಗ ತಾನಾಗಿಯೇ ಎಲ್ಲ ಕುಟುಂಬಗಳು ರೇಷನ್ ಪಡೆಯಬೇಕಾಗುತ್ತದೆ. ಶ್ರೀಮತಿ ಇಂದಿರಾಗಾಂಧಿ ಅವರು ಗರೀಬೀ ಹಟಾವೋ ಅಂತ ಹೇಳಿದ್ದರು. ನಾವು ಗರೀಬೋಂಕೊ ಹಟಾವೋ ಅಂತ ಹೇಳುತ್ತೇವೆ. ಅಷ್ಟೇ.

ಅಯೋಧ್ಯೆಯಲ್ಲಿ ಕಾರ್ಮಿಕ ಭವನ
ನೋಡಿ ಬಲ, ಎಡ, ಈ ಎರಡೂ ಸಿದ್ಧಾಂತಗಳು ಸಾಂಕೇತಿಕವಾಗಿ ಸಂಗಮವಾಗಬೇಕಾದರೆ ಅಯೋಧ್ಯೆಯಲ್ಲಿ ಕಾರ್ಮಿಕ ಭವನ ಆಗಬೇಕು ಅಷ್ಟೇ ಅಲ್ಲವೇ? ಅದೇನು ಮಹಾ ಬಿಡಿ. ರಾಮ ಮಂದಿರದ ಬದಲಿ ಕಾರ್ಮಿಕ ಭವನ. ಎರಡೂ ಬಿಲ್ಡಿಂಗ್ ಗಳೇ ತಾನೆ, ಅಷ್ಟೇನೂ ವ್ಯತ್ಯಾಸ ಇಲ್ಲ. ಆಗ ೧೯೯೦-೧೯೯೧ರಲ್ಲಿ ಒಬ್ಬೊಬ್ಬರಿಂದ ಒಂದು ರೂಪಾಯಿ ನಾಲ್ಕಾಣೆ ಸಂಗ್ರಹಿಸಿದ್ದೆವು, ಈಗ ಹಣದುಬ್ಬರ ಹೆಚ್ಚಾಗಿದೆ, ಎರಡು ರೂಪಾಯಿ ಎಂಟಾಣೆ ಸಂಗ್ರಹಿಸಿದರಾಯಿತು. ಸೇಮ್ ಡಿಫೆರೆನ್ಸ್. ಅಷ್ಟನ್ನೂ ಜನರಿಂದ ಕೊಡಲಿಕ್ಕೆ ಆಗೊದಿಲ್ಲ ಎಂದರೆ ನಮ್ಮ ಸ್ನೇಹಿತರಾದ ಜಗನ್ ಮೋಹನ್ ರೆಡ್ಡಿ ಅವರನ್ನು ಈ ಪ್ರಾಯೋಜಕರನ್ನಾಗಿ ಮಾಡಿದರಾಯಿತು. ಎಂದರು. ಅವರ ಹುಡುಗರು ಗೋರಿ ಕಟ್ಟುವುದರಲ್ಲಿ ನಿಷ್ಣಾತರು. ಅದು ಪಕ್ಷವಿರಲಿ, ಪಕ್ಷದ ಕಾರ್ಯಕರ್ತರಿರಲಿ ಅವರಿಗೆ ಎಲ್ಲ ಒಂದೆ.

ಕಟ್ಟುವುದು ಹಾಗೂ ಕೆಡವುವುದು ಎಂಬ ರಚನಾತ್ಮಕ ಕ್ರಿಯೆ
ಇನ್ನು ಈ ಮಹಾ ಕಾರ್ಯದ ಮೊದಲ ಹೆಜ್ಜೆಯಾಗಿ ಒಂದು ಬಿಲ್ಡಿಂಗ್ ಕೆಡವಬೇಕು. ಬೆಂಗಳೂರಿನ ವಿಧಾನಸೌಧವನ್ನೇ ಕೆಡವಿದರಾಯಿತು. ಆಡಳಿತ ಯಂತ್ರವೆಲ್ಲ ಬಳ್ಳಾರಿಗೆ ಬಂದಮೇಲೆ ಆ ಖಾಲಿ ಫ್ಯಾಕ್ಟರಿ ಕಟ್ಟಡದಿಂದೇನು ಫಲ? ಅದನ್ನು ಕೆಡವಿದರೇನು, ಇನ್ನಷ್ಟು ದೊಡ್ಡದಾಗಿ ಬೆಳೆಸಿದರೇನು? ಮೂವತ್ತೈದು ಮಂತ್ರಿಗಳಲ್ಲಿ ಒಂದು ಮೂರೂವರೆ ಜನ ಮಾತ್ರ ವಿಧಾನಸೌಧಕ್ಕೆ ದಿನವೂ ಹೋಗುತ್ತಾರೆ, ಉಳಿದವರೆಲ್ಲ ಆ ಕಡೆ ತಲೆ ಹಾಕಿ ಮಲಗುವುದಿಲ್ಲ. ಹೀಗಿದ್ದಾಗ ಆ ಕಲ್ಲಿನ ಕಟ್ಟಡ ಯಾವಾನಿಗೆ ಬೇಕು. ಬೇರೆ ಯಾರಿಗೂ ಬೇಡ. ಆದರೆ, ನಮಗೆ ಆ ಜಾಗ ಅವಶ್ಯವಾಗಿ ಬೇಕಾಗಿದೆ.

ಕಬ್ಬನ್ ಪಾರ್ಕಿಂಗ್
ನಮಗೆ ಹೇಗಿದ್ದರೂ ವಾರದಲ್ಲಿ ಮೂರು ದಿನ ಹೈಕೋರ್ಟ್ ನಲ್ಲಿ ಕೆಲಸ ಇರುತ್ತದೆ. ಆದರೆ ಅಂಬೇಡ್ಕರ್ ವೀಧಿಯಲ್ಲಿ ಎಲ್ಲಿಯೂ ಪಾರ್ಕಿಂಗ್ ಜಾಗ ಇಲ್ಲ. ನಾವು ನಾಲ್ಕು ಜನ, ನಮ್ಮ ಸೆಕ್ಯೂರಿಟಿಯವರು ನಲವತ್ತು-ನಲವತ್ತು ಜನ, ನಮ್ಮ ಹಿಂಬಾಲಕರು ನಾನೂರು ಜನ, ಹೆಲಿಕಾಪ್ಟರಿನಲ್ಲಿ ಬಂದು ಹೋಗಬೇಕೆಂದರೆ ಬಹಳ ಕಿರಿಕಿರಿಯಾಗುತ್ತದೆ. ಹೀಗಾಗಿ ಹೈಕೋರ್ಟ್ ಎದುರಿಗೆ ವಿಧಾನಸೌಧವೇ ಇಲ್ಲದಿದ್ದರೆ ನಮಗೆ ಅನುಕೂಲವಾಗುತ್ತದೆ. ಆಫ್ಟರಾಲ್ ಈ ಇಡೀ ವ್ಯವಸ್ಥೆಯೇ ನಮ್ಮ ಅನುಕೂಲಕ್ಕಾಗಿ ಇದೆ ತಾನೆ? ಇಲ್ಲದಿದ್ದರೂ ಮಾಡಿಕೊಳ್ಳಬೇಕು ಎನ್ನುವವನು ನಾನು.

ಸರಕಾರವನ್ನೇ ಔಟ್ ಸೋರ್ಸ್ ಮಾಡುವ ಸತ್ಯಂ ನಾರಾಯಣ ವೃತ
ವಿಧಾನಸೌಧವೇ ಇಲ್ಲದಿದ್ದರೆ ಸರಕಾರ ಹೇಗೆ ಎನ್ನುವ ಚಿಂತೆ ಬೇಡಿ. ರಾಜ್ಯದ ಆಡಳಿತವನ್ನೆಲ್ಲ ನಾವು ಒಂದು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗೆ ಕೊಡಬೇಕು ಅಂತ ಮಾಡಿದ್ದೇವೆ. ಅದು ನಮ್ಮ ಸತ್ಯಂ ರಾಜು ಅವರು ಆರಂಭಿಸಿದ್ದು. ಅವರು ಸುಳ್ಳಂ ಆದ ಮೇಲೆ ಅದನ್ನು ಬೇರೆ ಕಂಪನಿಯವರು ಖರೀದಿ ಮಾಡಿದರು. ಅವರೀಗ ಆಫ್ರಿಕಾ, ಸೌದಿ ಅರೇಬಿಯಾ, ಪಶ್ಚಿಮ ರಷಿಯಾಗಳಲ್ಲಿನ ಕೆಲವು ದೇಶಗಳನ್ನು ತುಂಬ ಚೆನ್ನಾಗಿ ಮ್ಯಾನೇಜ್ ಮಾಡುತ್ತಿದ್ದಾರೆ. ಅಲ್ಲಿ ಹೆಸರಿಗೆ ಮಾತ್ರ ರಾಷ್ಟ್ರಾಧ್ಯಕ್ಷ, ಪ್ರಧಾನಿ ಅಂತ ಕೆಲವರನ್ನು ಇಟ್ಟಿದ್ದಾರೆ. ಕೆಲಸ ಎಲ್ಲ ಇವರದೇ, ಆದರೂ ಅವರಿಗೆ ದಿನ ನಿತ್ಯದ ಆಡಳಿತದಲ್ಲೇನಾದರೂ ತೊಂದರೆ ಬಂದರೆ ಇರಲಿ ಅಂತ ಹೈದ್ರಾಬಾದ್, ನೊಯಿಡಾ, ಹೊಸೂರುಗಳಲ್ಲಿ ಕಾಲ್ ಸೆಂಟರ್ ಗಳನ್ನು ಸ್ಥಾಪಿಸಿದ್ದಾರೆ. ಆದರೆ ಆ ನನ್ನ ಮಕ್ಕಳು ಎಂತ ದಡ್ಡರು ಎಂದರೆ ಈ ಕಾಲ್ ಸೆಂಟರ್ ಗಳಿಗೆ ಫೋನ್ ಮಾಡುವುದನ್ನು ಬಿಟ್ಟು ೧೦೮ ಆಂಬುಲನ್ಸ್ ಗಳಿಗೆ ಫೋನ್ ಮಾಡುತ್ತಿರುತ್ತಾರೆ. ಇರಲಿ. ನಮ್ಮ ಕೆಲಸ ಆದರೆ ಸಾಕು ಬಿಡಿ. ಒಟ್ಟಿನಲ್ಲಿ ಈ ಎರಡೂ ಸಿದ್ಧಾಂತಗಳ ಸಂಗಮದಿಂದ ನಮಗೆ ಸಂಪೂರ್ಣ ಸಂಪಾದನೆ ಆಗಬೇಕು. ಅಷ್ಟೇ ಅಲ್ಲವೇ, ಆಗುತ್ತದೆ. ನೀವು ಅಂದುಕೊಂಡದ್ದಕ್ಕಿಂತ ಬೇಗ ಆಗುತ್ತದೆ ಅಂತ ಅಂದರು.

ಪತ್ರಿಕಾ ಕಚೇರಿಗಳಲ್ಲಿ ಮೂಲಭೂತ ಹಕ್ಕುಗಳ ದಮನ
ನನ್ನ ತಲೆ ತಿರುಗಿದಂತಾಗಿ, ಹೊಟ್ಟೆ ತೊಳಸಿದಂತಾಗಲು ಶುರುವಾಯಿತು. ಈ ಆಕಾಶದಲ್ಲಿ ೧೦೮ ಆಂಬುಲೆನ್ಸಿಗೆ ಎಲ್ಲಿಂದ ಫೋನ್ ಮಾಡಲಿ ಅಂತ ತಿಳಿಯದೇ ನಿಂತೆ. ತಲೆ ತಿರುಗಿದಂತಾಗಿ ಬಿದ್ದೆ.

ಎದ್ದಾಗ ಕಚೇರಿಯ ಕಂಪ್ಯೂಟರ್ ಎದುರು ಇದ್ದೆ. ‘ಏನ್ರೀ ಕಳೆದ ಸಾರಿ ಮನೆಯಲ್ಲಾದರೂ ಮಲಗಿದ್ದಿರಿ. ಈಗ ನೋಡಿದರೆ ಇಲ್ಲೇ ಮಲಗಿದ್ದೀರಿ. ಏನ್ರೀ ಇದು' ಅಂತ ಬಾಸ್ ಜೋರಾಗಿ ಕಿರುಚುತ್ತಿದ್ದರು. ನಾನು ಆ ಕಡೆ ನೋಡದೇ ಟಾಯ್ಲೆಟ್ಟಿಗೆ ಹೋದೆ. ಅಲ್ಲಿ ನೀರಿರಲಿಲ್ಲ. ಆದರೆ ಇದು ಏರ್ ಷಿಪ್ ಅಲ್ಲ ಅನ್ನುವುದು ನೆನಪಾಯಿತು. ಒತ್ತಿ ಬರುತ್ತಿರುವ ಭಾವನೆಗಳನ್ನು ದಮನ ಮಾಡುತ್ತಾ ಹೊರಬಂದೆ.

(ಮುಗಿಯಿತು)

ಹೃಷಿಕೇಶರ ಪಡಿಪಾಟಲುಗಳನ್ನು ಶುರುವಿನಿಂದಲೇ ಓದಲು ಇಲ್ಲಿ ಕ್ಲಿಕ್ ಮಾಡಿ
Print Close

No comments: